ಗದಗದ ಎಇಇ ಫರ್ವೇಜ್ ಪತ್ತೆ | ಅನುದಾನದ ಕೊರತೆ, ಕಿರುಕುಳದ ಆರೋಪಗಳಿಗೆ ಉತ್ತರವೆಲ್ಲಿ?
ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಗದಗದ ಕೆಆರ್ಐಡಿಎಲ್ (KRIDL) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಫರ್ವೇಜ್ ಧಾರವಾಡ ನಾಪತ್ತೆ ಪ್ರಕರಣಕ್ಕೆ ಕೊನೆಗೂ ಮಹತ್ವದ ತಿರುವು ಸಿಕ್ಕಿದೆ. ಸತತ 40 ದಿನಗಳ ಹುಡುಕಾಟದ ಬಳಿಕ ಮುಂಬೈ ರೈಲು ನಿಲ್ದಾಣದಲ್ಲಿ ಪತ್ತೆಯಾದ ಅವರನ್ನು ಗದಗಕ್ಕೆ ಕರೆತಂದ ಪೊಲೀಸರು ವಿಚಾರಣೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಸೆಪ್ಟೆಂಬರ್ 13ರಂದು ಫರ್ವೇಜ್ ಅವರು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದರು. ಅನುದಾನದ ಕೊರತೆ ಹಾಗೂ ಗುತ್ತಿಗೆದಾರರ ಕಿರುಕುಳದಿಂದ ಬೇಸತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರೆನ್ನಲಾದ ಹಿನ್ನೆಲೆಯಲ್ಲಿ ಈ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರಿ ಇಲಾಖೆಗಳ ಆರ್ಥಿಕ ಪರಿಸ್ಥಿತಿ ಹಾಗೂ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಚಾರವಾಗಿ ರಾಜಕೀಯ ವಲಯದಲ್ಲೂ ಹಲವು ಪ್ರಶ್ನೆಗಳು ಎದ್ದಿದ್ದವು.
ಮುಂಬೈ ರೈಲು ನಿಲ್ದಾಣದಲ್ಲಿ ಪತ್ತೆ
ಫರ್ವೇಜ್ ನಾಪತ್ತೆಯಾದ ಬಳಿಕ ಬೆಟಗೇರಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ಹುಡುಕಾಟ ನಡೆಸಿದ್ದರು. ಮೊಬೈಲ್ ಸಿಮ್ ಕಾರ್ಡ್ ಬಳಸದೆ ವೈಫೈ ಮೂಲಕ ಮೊಬೈಲ್ ಸಂಪರ್ಕ ಸಾಧಿಸುತ್ತಿದ್ದ ಕಾರಣ ಅವರ ಪತ್ತೆ ಕಾರ್ಯ ಪೊಲೀಸರಿಗೆ ಸವಾಲಾಗಿತ್ತು.
ಈ ಅವಧಿಯಲ್ಲಿ ಬೆಂಗಳೂರು, ಆಂಧ್ರಪ್ರದೇಶ, ಬಿಹಾರ, ಉತ್ತರಾಖಂಡ, ದೆಹಲಿ, ಭೋಪಾಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚರಿಸಿದ್ದರೆಂದು ತಿಳಿದುಬಂದಿದೆ. ವಿವಿಧ ನಗರಗಳು ಹಾಗೂ ದರ್ಗಾಗಳಿಗೂ ಭೇಟಿ ನೀಡಿದ್ದರೆಂದು ವರದಿಯಾಗಿದೆ.
ನಿರಂತರ ಶೋಧ ಮತ್ತು ತಾಂತ್ರಿಕ ತನಿಖೆಯ ಬಳಿಕ ಪೊಲೀಸರು ಫರ್ವೇಜ್ ಅವರನ್ನು ಮುಂಬೈ ರೈಲು ನಿಲ್ದಾಣದಲ್ಲಿ ಪತ್ತೆಹಚ್ಚಿದ್ದಾರೆ. ಅಲ್ಲಿಂದ ಗದಗಕ್ಕೆ ಕರೆತಂದು ರಹಸ್ಯ ಸ್ಥಳದಲ್ಲಿ ಆರೇಳು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಗಮನ
ಫರ್ವೇಜ್ ಪತ್ತೆಯಾಗಿರುವುದರಿಂದ ಅವರನ್ನು ಹುಡುಕುವ ಕಾರ್ಯ ಅಂತ್ಯಗೊಂಡಿದೆ. ಆದರೆ, ಅವರು ನಾಪತ್ತೆಯಾಗಲು ಕಾರಣವಾದ ಪರಿಸ್ಥಿತಿಗಳು ಮತ್ತು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿದ್ದ ಪತ್ರದಲ್ಲಿನ ಆರೋಪಗಳ ಕುರಿತು ಇನ್ನೂ ಸ್ಪಷ್ಟತೆ ಅಗತ್ಯವಿದೆ. ಅನುದಾನದ ಕೊರತೆಗೆ ಕಾರಣವೇನು? ಗುತ್ತಿಗೆದಾರರಿಂದ ಒತ್ತಡವಿತ್ತೇ? ಪತ್ರದಲ್ಲಿ ಪ್ರಸ್ತಾಪಿಸಿದ್ದ ಸಮಸ್ಯೆಗಳ ಕುರಿತು ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಸ್ಪಷ್ಟನೆ ಹಾಗೂ ಫರ್ವೇಜ್ ಅವರ ಅಧಿಕೃತ ಹೇಳಿಕೆ ಮಹತ್ವದ್ದಾಗಿದೆ.
ತಂದೆ-ಮಗನ ಭಾವುಕ ಭೇಟಿ
40 ದಿನಗಳ ಬಳಿಕ ಮಗನನ್ನು ಕಂಡ ತಂದೆ ಜಾಫರ್ ಸಾಬ್ ಭಾವುಕರಾಗಿದ್ದಾರೆ. ಮಗ ಪತ್ತೆಯಾದ ಸುದ್ದಿ ಕುಟುಂಬಕ್ಕೆ ನೆಮ್ಮದಿ ತಂದಿದ್ದು, ಪೊಲೀಸರ ನಿರಂತರ ಪ್ರಯತ್ನ ಹಾಗೂ ಮಾಧ್ಯಮಗಳ ಸಹಕಾರಕ್ಕೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಪೊಲೀಸರಿಂದ ಹಸ್ತಾಂತರಗೊಂಡ ಬಳಿಕ ಫರ್ವೇಜ್ ಗದಗದ ಮನೆಗೆ ತೆರಳದೆ, ಒಂದು ವರ್ಷದ ಮಗುವನ್ನು ನೋಡಲು ಹಾವೇರಿಯಲ್ಲಿರುವ ಪತ್ನಿಯ ಮನೆಗೆ ತೆರಳಿದ್ದಾರೆ ಎಂದು ಜಾಫರ್ ಸಾಬ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.








