ಬೆಂಗಳೂರು: ನಗರದ ಗಂಗಮ್ಮನಗುಡಿ ವ್ಯಾಪ್ತಿಯ ಕಮ್ಮಗೊಂಡನಹಳ್ಳಿಯಲ್ಲಿ ಗ್ಯಾಸ್ ರಿಫಿಲ್ಲಿಂಗ್ ಅಂಗಡಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ದಂಪತಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಕಿ ಅವಘಡ ಸಂಭವಿಸಿದ ಎರಡು ದಿನಗಳ ಬಳಿಕ ಅಂಗಡಿಯ ಮೊದಲ ಮಹಡಿಯಲ್ಲಿ ನಾಗರತ್ನ ಮತ್ತು ಆಕಾಶ್ ಅವರ ಮೃತದೇಹಗಳು ಪತ್ತೆಯಾಗಿವೆ.
ಕಳೆದ ಶನಿವಾರ ರಾತ್ರಿ ಗ್ಯಾಸ್ ರಿಫಿಲ್ಲಿಂಗ್ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ 20ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ಗಳು ಸರಣಿ ಸ್ಫೋಟಗೊಂಡಿದ್ದವು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದರು.
ಆರಂಭದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದರು. ಆದರೆ, ಇಂದು ಬೆಂಕಿಯ ಅವಶೇಷಗಳನ್ನು ತೆರವುಗೊಳಿಸಲು ಬಂದಾಗ ಮೊದಲ ಮಹಡಿಯಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿವೆ.
ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ನಾಗರತ್ನ ಮತ್ತು ಆಕಾಶ್ ಮೊದಲ ಮಹಡಿಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ದಟ್ಟ ಹೊಗೆಯಿಂದ ಉಸಿರುಗಟ್ಟಿ ಇಬ್ಬರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಗಂಗಮ್ಮನಗುಡಿ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುರಂತದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.










