ದೊಡ್ಡಬಳ್ಳಾಪುರ: ತಾಲೂಕಿನಲ್ಲಿರುವ ಘಾಟಿ ಸುಬ್ರಮಣ್ಯ ದೇವಾಲಯದ ಅಭಿವೃದ್ಧಿಗೆ ಬರೋಬ್ಬರಿ 23 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
ಭಕ್ತರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ, ಐತಿಹಾಸಿಕ ದೇವಾಲಯದ ಮೂಲ ಸೌಂದರ್ಯವನ್ನು ಉಳಿಸಿಕೊಳ್ಳುವ ಪ್ರಯತ್ನವೂ ನಡೆದಿದೆ.
ಹೌದು, ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಮಂಗಳವಾರ, ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಆದರೆ, ಭಕ್ತರ ಸಂಖ್ಯೆಗೆ ತಕ್ಕಂತೆ ಮೂಲಸೌಕರ್ಯಗಳಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಮಳೆ ಇರಲಿ, ಬಿಸಿಲಿರಲಿ, ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಭಕ್ತರದ್ದಾಗಿತ್ತು.
ಇದನ್ನು ಮನಗಂಡು ದೇವಾಲಯದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಸಚಿವ ಕೆ.ಎಚ್. ಮುನಿಯಪ್ಪ ಅವರ ಮುಂದಾಳತ್ವದಲ್ಲಿ ಎರಡು ವರ್ಷಗಳ ಹಿಂದೆ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿದ ಕ್ಷೇತ್ರದಲ್ಲಿ ಇದೀಗ ಬೃಹತ್ ಅನ್ನದಾಸೋಹ ಭವನ, ಯಾತ್ರಿ ನಿವಾಸ ಹಾಗೂ ರಥಬೀದಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ದೇವಾಲಯದ ಮುಂಭಾಗದಲ್ಲಿದ್ದ ಅಂಗಡಿಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಕಾರ್ಯಗಳಿಗೆ ದಾರಿ ಮಾಡಿಕೊಡಲಾಗಿದೆ.
ಇನ್ನು ದೇವಾಲಯದ ಸೌಂದರ್ಯ ಹೆಚ್ಚಿಸುವ ಕೆಲಸವೂ ಭರದಿಂದ ಸಾಗಿದೆ. ಮಂಗಳೂರು ಶೈಲಿಯ ಹೆಂಚಿನ ಮೇಲ್ಚಾವಣಿ, ಕಲ್ಲಿನ ಕೆತ್ತನೆಗಳು, ಶಿಥಿಲಗೊಂಡ ಗೋಪುರಗಳ ಜೀರ್ಣೋದ್ಧಾರ ಹಾಗೂ ಕಲ್ಲಿನ ಕಂಬಗಳ ಮಂಟಪ ನಿರ್ಮಾಣದ ಮೂಲಕ ದೇವಾಲಯಕ್ಕೆ ಹೊಸ ಮೆರುಗು ನೀಡಲಾಗುತ್ತಿದೆ. ಅಯೋಧ್ಯೆಯಿಂದ ತರಿಸಲಾದ ಬಿಳಿ ಅಮೃತಶಿಲೆಯ ಬಳಕೆಯೂ ದೇವಾಲಯದ ಆಕರ್ಷಣೆಯನ್ನು ಹೆಚ್ಚಿಸಿದೆ.
ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ದೇವಾಲಯದ ಇತಿಹಾಸ ಮತ್ತು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಗರ್ಭಗುಡಿಯಲ್ಲಿ ಯಾವುದೇ ಬದಲಾವಣೆ ಮಾಡದೆ, ಉಳಿದ ಭಾಗಗಳಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ಒಟ್ಟಿನಲ್ಲಿ, ಆಧುನಿಕ ಸೌಲಭ್ಯಗಳು ಒಂದೆಡೆಯಾದರೆ, ಶತಮಾನಗಳ ಪರಂಪರೆಯ ಸಂರಕ್ಷಣೆ ಮತ್ತೊಂದೆಡೆ. ಈ ಎರಡನ್ನೂ ಸಮನ್ವಯಗೊಳಿಸಿ ಘಾಟಿ ಸುಬ್ರಮಣ್ಯ ಕ್ಷೇತ್ರವನ್ನು ಮತ್ತಷ್ಟು ಸುಂದರಗೊಳಿಸುವ ಪ್ರಯತ್ನ ನಡೆಯುತ್ತಿದೆ.










