ಲಕ್ಷ್ಮೇಶ್ವರ-ಶಿರಹಟ್ಟಿ: ಗದಗ ಜಿಲ್ಲೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ನವೆಂಬರ್ 5ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರದಿಂದಲೇ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳ ಪರಿಶೀಲನೆ ಆರಂಭಿಸಿದೆ. ತಹಸೀಲ್ದಾರ್ ಕಚೇರಿ, ಸರ್ಕಾರಿ ಆಸ್ಪತ್ರೆ, ವಸತಿ ನಿಲಯ ಸೇರಿದಂತೆ ವಿವಿಧೆಡೆ ದಿಢೀರ್ ಭೇಟಿ ನೀಡಿ ಕಡತಗಳು, ದಾಖಲೆಗಳು ಹಾಗೂ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಕುರಿತು ಮಾಹಿತಿ ಸಂಗ್ರಹಿಸಿದೆ. ಅಧಿಕಾರಿಗಳ ದಿಢೀರ್ ಭೇಟಿಯಿಂದ ಸರ್ಕಾರಿ ಕಚೇರಿಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಲಕ್ಷ್ಮೇಶ್ವರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ವಿವಿಧ ಇಲಾಖೆಗಳ ಕಡತಗಳನ್ನು ಪರಿಶೀಲಿಸಿತು. ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿತು. ಶಿರಹಟ್ಟಿ ತಾಲೂಕು ಕೇಂದ್ರದ ವಿವಿಧ ಸರ್ಕಾರಿ ಕಚೇರಿಗಳಿಗೂ ಭೇಟಿ ನೀಡಿ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ದಾಖಲೆಗಳ ನಿರ್ವಹಣೆ ಪರಿಶೀಲಿಸಿತು.
ಆಸ್ಪತ್ರೆ ಸ್ವಚ್ಛತೆಗೆ ಖಡಕ್ ಸೂಚನೆ
ಲಕ್ಷ್ಮೇಶ್ವರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಶೌಚಾಲಯ, ಮೂತ್ರಾಲಯ ಹಾಗೂ ಸ್ನಾನಗೃಹಗಳ ಸ್ವಚ್ಛತೆಯನ್ನು ಪರಿಶೀಲಿಸಿದರು. ದಿನಕ್ಕೆ ಮೂರು ಬಾರಿ ಸ್ವಚ್ಛಗೊಳಿಸಿ, ಯಾವುದೇ ಕಾರಣಕ್ಕೂ ದುರ್ವಾಸನೆ ಬಾರದಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಳೆದ ಎರಡು ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ಸ್ವಚ್ಛತಾ ಸಿಬ್ಬಂದಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಹೆರಿಗೆ ವಾರ್ಡ್ಗೆ ಭೇಟಿ ನೀಡಿದ ಅಧಿಕಾರಿಗಳು ಬಾಣಂತಿಯರೊಂದಿಗೆ ಸಂವಾದ ನಡೆಸಿ, ಊಟ, ಉಪಾಹಾರ ಹಾಗೂ ಚಿಕಿತ್ಸೆಗೆ ಹಣ ಪಡೆಯಲಾಗುತ್ತಿದೆಯೇ ಎಂದು ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಾಣಂತಿಯರು, ಆಸ್ಪತ್ರೆಯಲ್ಲಿ ಯಾರೂ ಹಣ ಕೇಳುತ್ತಿಲ್ಲ. ಊಟ ಮತ್ತು ಉಪಾಹಾರವನ್ನು ಸಮರ್ಪಕವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಂತರ ಆಸ್ಪತ್ರೆಯ ಎಕ್ಸ್ರೇ ವಿಭಾಗ, ರಕ್ತಭಂಡಾರ ಹಾಗೂ ಡಯಾಲಿಸಿಸ್ ವಿಭಾಗಗಳನ್ನೂ ಪರಿಶೀಲಿಸಿದರು. ಈ ವೇಳೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಆಸ್ಪತ್ರೆಯ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಇದಲ್ಲದೆ ಅಲ್ಪಸಂಖ್ಯಾತರ ವಸತಿ ನಿಲಯ, ವಿದ್ಯಾರ್ಥಿನಿಯರ ಕಾಲೇಜು ವಸತಿ ನಿಲಯ ಹಾಗೂ ಉಗ್ರಾಣಕ್ಕೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಲೋಕಾಯುಕ್ತ ಅಧಿಕಾರಿಗಳ ತಂಡ ಮುಂದಿನ ಎರಡು ದಿನಗಳ ಕಾಲ ತಾಲೂಕಿನಲ್ಲಿ ಪರಿಶೀಲನೆ ಮುಂದುವರಿಸಲಿದ್ದು, ವಿವಿಧ ಗ್ರಾಮ ಪಂಚಾಯಿತಿಗಳು ಹಾಗೂ ಸರ್ಕಾರಿ ಕಚೇರಿಗಳಿಗೂ ಭೇಟಿ ನೀಡುವ ನಿರೀಕ್ಷೆಯಿದೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಮೆಹಬೂಬಅಲಿ ನದಾಫ್ ಸೇರಿದಂತೆ ಸಿಬ್ಬಂದಿ ಇದ್ದರು.
ಸರ್ಕಾರಿ ಕಚೇರಿಗಳಲ್ಲಿನ ದಾಖಲೆಗಳ ನಿರ್ವಹಣೆ, ಕಡತಗಳ ವಿಲೇವಾರಿ ಹಾಗೂ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗುತ್ತಿದೆ. ಆಡಳಿತಾತ್ಮಕ ಕಾರ್ಯವೈಖರಿಯನ್ನು ಪರಿಶೀಲಿಸುವುದೇ ಲೋಕಾಯುಕ್ತ ಭೇಟಿಯ ಮುಖ್ಯ ಉದ್ದೇಶವಾಗಿದೆ.
— ವಸಂತ, ಲೋಕಾಯುಕ್ತ ಡಿವೈಎಸ್ಪಿ









