ರಾಯಚೂರು: ಕಾರಿಗೆ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ದಂಪತಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹೊಸಳ್ಳಿ ಕ್ಯಾಂಪ್ ಬಳಿ ನಡೆದಿದೆ.

ಬಳ್ಳಾರಿಯ ಇಂದಿರಾನಗರದ 27 ವರ್ಷದ ರಾಘವೇಂದ್ರ ಹಾಗೂ 26 ವರ್ಷದ ಹೇಮಲತಾ ಮೃತಪಟ್ಟ ದಂಪತಿ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರವಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ದಂಪತಿ ಸೇರಿದಂತೆ ಮೂವರು ಸಿಂಧನೂರಿನಿಂದ ಬಳ್ಳಾರಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದ್ದು, ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಪಘಾತದ ಬಳಿಕ ಡಿಕ್ಕಿ ಹೊಡೆದ ವಾಹನದ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಈ ಕುರಿತು ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.










