ಶಿವಮೊಗ್ಗ: ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪೋಸ್ಟರ್ ವಾರ್ ಇದೀಗ ಮಲೆನಾಡು ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದೆ.

ನಗರದ ಜಿಲ್ಲಾ ಬಿಜೆಪಿ ಕಚೇರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿವಾಸದ ಕಾಂಪೌಂಡ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ದೀನದಯಾಳ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ಹಾಗೂ ಬೈಪಾಸ್ ರಸ್ತೆಯ ಸಮೀಪವಿರುವ ಬಿ.ವೈ. ವಿಜಯೇಂದ್ರ ಅವರ ‘ಮೈತ್ರಾದೇವಿ’ ನಿವಾಸದ ಕಾಂಪೌಂಡ್ಗೆ ನಿನ್ನೆ ತಡರಾತ್ರಿ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ‘ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು ಕಳ್ಳನ ಮಕ್ಕಳು’ ಎಂಬ ಬರಹವಿರುವ ಪೋಸ್ಟರ್ಗಳನ್ನು ಬಿಜೆಪಿ ಕಚೇರಿಯ ಶಟರ್, ಗೋಡೆ ಹಾಗೂ ವಿಜಯೇಂದ್ರ ಅವರ ನಿವಾಸದ ಕಾಂಪೌಂಡ್ಗೆ ಅಳವಡಿಸಲಾಗಿದೆ.
ಬಿ.ವೈ. ವಿಜಯೇಂದ್ರ ಅವರ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟರ್ ಅಭಿಯಾನ ನಡೆಸಿದ್ದಾರೆ ಎನ್ನಲಾಗಿದೆ.
ಪೋಸ್ಟರ್ ತೆರವಿಗೆ ಮುಂದಾದ ಬಿಜೆಪಿ ಕಾರ್ಯಕರ್ತರು
ಬಿಜೆಪಿ ಕಚೇರಿ ಹಾಗೂ ವಿಜಯೇಂದ್ರ ಅವರ ನಿವಾಸಕ್ಕೆ ಪೋಸ್ಟರ್ ಅಂಟಿಸಿರುವ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ಪದಾಧಿಕಾರಿಗಳು ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಹಾಗೂ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪೋಸ್ಟರ್ಗಳನ್ನು ವೀಕ್ಷಿಸಿದರು.
ನಂತರ ಬಿಜೆಪಿ ಕಾರ್ಯಕರ್ತರು ಕಚೇರಿಯ ಎದುರು ಅಂಟಿಸಲಾಗಿದ್ದ ಪೋಸ್ಟರ್ಗಳನ್ನು ತೆರವುಗೊಳಿಸಿದರು.
ಕೃತ್ಯವನ್ನು ಸಹಿಸುವುದಿಲ್ಲ: ಜಗದೀಶ್ ಎಚ್ಚರಿಕೆ
ಈ ಕುರಿತು ಮಾತನಾಡಿದ ಬಿಜೆಪಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಪೋಸ್ಟರ್ ಅಂಟಿಸಿರುವುದು ಖಂಡನೀಯ. ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಗುಂಡಾಗಿರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇಂತಹ ಕೃತ್ಯಗಳನ್ನು ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.










