ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ಜೆಟ್ ವಿಮಾನ ರದ್ದಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮಾನ ರದ್ದತಿ ವಿಚಾರವನ್ನು ಕೊನೆಯ ಕ್ಷಣದಲ್ಲಿ ತಿಳಿಸಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ಏರ್ಲೈನ್ಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನವೆಂಬರ್ 7ರಂದು ನಡೆದ ಈ ಘಟನೆಯಲ್ಲಿ, ದೆಹಲಿಗೆ ತೆರಳಲು ಸ್ಪೈಸ್ಜೆಟ್ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಮಹಿಳೆ ಸೇರಿದಂತೆ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಕೊನೆಯ ಕ್ಷಣದಲ್ಲಿ ವಿಮಾನವನ್ನು ರದ್ದುಗೊಳಿಸಿದ ಏರ್ಲೈನ್ಸ್, ಈ ಬಗ್ಗೆ ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಇದರಿಂದ ಅಸಮಾಧಾನಗೊಂಡ ಸುಮಾರು 35 ಪ್ರಯಾಣಿಕರು ಸ್ಪೈಸ್ಜೆಟ್ ಕೌಂಟರ್ ಬಳಿ ಜಮಾಯಿಸಿದ್ದಾರೆ. ವಿಮಾನ ರದ್ದತಿಗೆ ಕಾರಣವೇನು ಹಾಗೂ ಪರ್ಯಾಯ ವ್ಯವಸ್ಥೆ ಏನು ಎಂಬ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಈ ವೇಳೆ ಪ್ರಯಾಣಿಕರು ಮತ್ತು ಏರ್ಲೈನ್ಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಆಕ್ರೋಶದ ಭರದಲ್ಲಿ ಕೆಲವು ಪ್ರಯಾಣಿಕರು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಓರ್ವ ಮಹಿಳೆ ಸ್ಪೈಸ್ಜೆಟ್ನ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಮಾನಯಾನ ಸಂಸ್ಥೆಯ ಸೇವೆ ಹಾಗೂ ಪ್ರಯಾಣಿಕರ ವರ್ತನೆ ಕುರಿತು ಚರ್ಚೆ ಶುರುವಾಗಿದೆ.










