ಬೆಂಗಳೂರು: ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ವಿಚಾರ ಹಾಗೂ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ವಿಷಯ ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್ನಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಸರ್ಕಾರದ ಬಳಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಪೆಟ್ರೋಲ್ ಬಂಕ್ನವರೇ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿದರೆ ಅದನ್ನು ಪತ್ತೆಹಚ್ಚುವುದು ಹೇಗೆ? ಎಥೆನಾಲ್ ಪ್ರಮಾಣ ಪರೀಕ್ಷಿಸಲು ಅಗತ್ಯವಾದ ಹೈಕ್ವಾಲಿಟಿ ಉಪಕರಣಗಳು ನಮ್ಮ ಬಳಿ ಎಲ್ಲಿವೆ? ಹಬ್ಬದ ಕಾರಣಕ್ಕೆ ಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂದು ಹೇಳುವುದಾದರೆ ಹೇಗೆ? ಸರ್ಕಾರದ ಬಳಿ ಈ ಬಗ್ಗೆ ಅಂಕಿ-ಅಂಶಗಳಿದ್ದರೆ ಬಿಡುಗಡೆ ಮಾಡಲಿ ಎಂದು ಆರ್. ಅಶೋಕ್ ಸವಾಲು ಹಾಕಿದರು.
ಪೆಟ್ರೋಲ್ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ದೇಶದ ಹಣ ಉಳಿತಾಯ ಮಾಡುವ ಉದ್ದೇಶದಿಂದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನು ರಾಜ್ಯದ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದ ಆರ್. ಅಶೋಕ್, ಹಾಲು ತಮಿಳುನಾಡಿನಿಂದ ಚಿಕ್ಕಪೇಟೆಗೆ ಬರುತ್ತಿದೆ, ಅಕ್ಕಿಯಲ್ಲಿ ಕಲ್ಲು ಬೆರೆಸಲಾಗುತ್ತಿದೆ. ಅಕ್ರಮ ಡ್ರಗ್ಸ್ ಕಾರ್ಖಾನೆಗಳೂ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಮಾಡಿದರು. ಇಂತಹ ಸಮಸ್ಯೆಗಳತ್ತ ಮೊದಲು ಗಮನಹರಿಸುವಂತೆ ಸರ್ಕಾರಕ್ಕೆ ತಿರುಗೇಟು ನೀಡಿದರು.
ಕಾವೇರಿ ನೀರು ಮಲಿನಗೊಂಡಿರುವ ಕುರಿತು ತಮಿಳುನಾಡು ವರದಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕರು ಮೊದಲು ತಮ್ಮ ರಾಜ್ಯದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲಿ ಎಂದು ಟೀಕಿಸಿದರು.
ಗೃಹಲಕ್ಷ್ಮಿ ಬಾಕಿ ₹5 ಸಾವಿರ ಕೊಡಲೇಬೇಕು:
ಇನ್ನೊಂದೆಡೆ, ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ವಿಚಾರದಲ್ಲೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆರ್. ಅಶೋಕ್, ಚುನಾವಣೆಗೂ ಮುನ್ನ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಈಗ ಹಣ ಪಾವತಿಸಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಉಳಿದಿರುವ 5 ಸಾವಿರ ರೂಪಾಯಿಗಳನ್ನು ಸರ್ಕಾರ ಪಾವತಿಸಲೇಬೇಕು. ಈ ವಿಚಾರವನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ಭವಿಷ್ಯದ ಬಗ್ಗೆಯೂ ವ್ಯಂಗ್ಯವಾಡಿದ ಅವರು, ಈ ಸರ್ಕಾರ ಮುಂದಿನ ಒಂದು ವರ್ಷ ಅಧಿಕಾರದಲ್ಲಿ ಮುಂದುವರಿಯುವ ಖಾತರಿ ಇಲ್ಲ. ಮುಖ್ಯಮಂತ್ರಿ ಅವರೇ ಸರ್ಕಾರಕ್ಕೆ ಹಳ್ಳ ತೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.









