ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ಭಕ್ತರ ದಟ್ಟಣೆಯ ನಡುವೆ ಅವಘಡ ಸಂಭವಿಸಿದೆ.

ಬೆಟ್ಟದ ತುದಿಯಲ್ಲಿ ಭಕ್ತರು ಹತ್ತಲು ಅನುಕೂಲವಾಗುವಂತೆ ಅಳವಡಿಸಿದ್ದ ಕಂಬಿ ಮುರಿದುಬಿದ್ದ ಪರಿಣಾಮ, ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಗಾಯಾಳುಗಳನ್ನು ಬೆಟ್ಟದಿಂದ ಕೆಳಕ್ಕೆ ಹೊತ್ತುತಂದಿದ್ದಾರೆ. ಬಳಿಕ ಆಂಬ್ಯುಲೆನ್ಸ್ಗಳ ಮೂಲಕ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇವಿರಮ್ಮ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ದೇವಿರಮ್ಮನ ಆಶೀರ್ವಾದ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ. ಈ ಬಾರಿ ನಿರೀಕ್ಷೆಗೂ ಮೀರಿ ಭಕ್ತರು ಬೆಟ್ಟದತ್ತ ಹೆಜ್ಜೆ ಹಾಕಿದ್ದು, ಸುಮಾರು ಒಂದು ಲಕ್ಷ ಜನರು ದರ್ಶನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇಂದು ದೇವಿರಮ್ಮನ ದರ್ಶನಕ್ಕೆ ಕೊನೆಯ ದಿನವಾಗಿರುವುದರಿಂದ ನಿನ್ನೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹಸಿರು ಸಿರಿಯ ನಡುವೆ ಇರುವ ಕಡಿದಾದ ಬೆಟ್ಟದ ಹಾದಿಯಲ್ಲಿ ಭಕ್ತರು ದೇವಿಯ ದರ್ಶನಕ್ಕಾಗಿ ಸಾಗುತ್ತಿದ್ದಾರೆ.
ಈ ನಡುವೆ ಕಂಬಿ ಮುರಿದು ಸಂಭವಿಸಿದ ಅವಘಡ ಭಕ್ತರಲ್ಲಿ ಆತಂಕ ಮೂಡಿಸಿದೆ.








