ಬೆಂಗಳೂರು: ರಾಜ್ಯದ ರೈತರ ಬ್ಯಾಂಕ್ ಖಾತೆಗಳಿಗೆ ನಿರೀಕ್ಷೆಗಿಂತ ಕಡಿಮೆ ಬರ ಪರಿಹಾರದ ಹಣ ಜಮೆಯಾಗಿರುವ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿ ರೈತರಿಗೆ ತಲಾ ₹5 ಸಾವಿರ ನೀಡಲು ನಿರ್ಧರಿಸಲಾಗಿದ್ದು, ಯಾರ ಖಾತೆಗೆ ಹಣ ಸರಿಯಾಗಿ ಜಮೆಯಾಗಿಲ್ಲವೋ ಅದನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಹೀಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ರೈತರ ಖಾತೆಗಳಿಗೆ ಕಡಿಮೆ ಪರಿಹಾರದ ಹಣ ಜಮೆಯಾಗಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ರೈತರಿಗೆ ₹5 ಸಾವಿರ ನೀಡುವುದು ನಿಗದಿಯಾಗಿದೆ. ಕೆಲವು ಖಾತೆಗಳಿಗೆ ಹಣ ಜಮೆಯಾಗುವಲ್ಲಿ ಹೆಚ್ಚು-ಕಡಿಮೆ ಆಗಿದೆ. ಅದನ್ನು ಸರಿಪಡಿಸಿ ಬಾಕಿ ಹಣವನ್ನು ಪಾವತಿಸುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬಂದರೂ, ಬರದಿದ್ದರೂ ರಾಜ್ಯ ಸರ್ಕಾರ ರೈತರಿಗೆ ತಲಾ ₹5 ಸಾವಿರದವರೆಗೆ ನೀಡಲು ತೀರ್ಮಾನಿಸಿದೆ. ಈಗಾಗಲೇ ಹಣ ಪಾವತಿ ಪ್ರಕ್ರಿಯೆ ಆರಂಭವಾಗಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಹೇಳಿದರು.
ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಯುತ್ತಿದೆ
ಪರಿಹಾರದ ಹಣ ಕಡಿಮೆ ಜಮೆಯಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿಲ್ಲ. ಕೆಲವು ರೈತರ ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆಗಳಿವೆ. ಕೆಲವು ಖಾತೆಗಳು ಸಾಲದ ಕಾರಣಕ್ಕೆ ಬ್ಯಾಂಕ್ಗಳಿಗೆ ಅಟ್ಯಾಚ್ ಆಗಿರುವ ದಾಖಲೆಗಳೂ ಇವೆ. ಇಂತಹ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಖಾತೆಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಅರ್ಹ ರೈತರಿಗೆ ನಿಗದಿಪಡಿಸಿದ ಪರಿಹಾರದ ಹಣ ತಲುಪಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.









