ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಎರಡು ಬಾರಿ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ಬಳಸುವ ಟೂತ್ಬ್ರಷ್ ಅನ್ನು ಸರಿಯಾದ ಸಮಯಕ್ಕೆ ಬದಲಾಯಿಸುವುದೂ ಅಷ್ಟೇ ಮುಖ್ಯ.

ಸವೆದ ಅಥವಾ ಹಳೆಯ ಬ್ರಷ್ ಬಳಸಿ ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲಿರುವ ಪ್ಲಾಕ್ ಹಾಗೂ ಆಹಾರದ ಕಣಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಟೂತ್ಬ್ರಷ್ ಅನ್ನು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಬೇಕು? ಬ್ರಷ್ ಬದಲಾಯಿಸುವ ಸಮಯ ಬಂದಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು? ಇಲ್ಲಿದೆ ಮಾಹಿತಿ.
ಪ್ರತಿ 3ರಿಂದ 4 ತಿಂಗಳಿಗೊಮ್ಮೆ ಟೂತ್ಬ್ರಷ್ ಬದಲಾಯಿಸಿ:
ಅಮೆರಿಕನ್ ಡೆಂಟಲ್ ಅಸೋಸಿಯೇಷನ್ (ADA) ಶಿಫಾರಸಿನ ಪ್ರಕಾರ, ಸಾಮಾನ್ಯವಾಗಿ ಪ್ರತಿ ಮೂರುರಿಂದ ನಾಲ್ಕು ತಿಂಗಳಿಗೊಮ್ಮೆ ಟೂತ್ಬ್ರಷ್ ಬದಲಾಯಿಸುವುದು ಉತ್ತಮ. ಈ ನಿಯಮ ಸಾಮಾನ್ಯ ಹಾಗೂ ಎಲೆಕ್ಟ್ರಿಕ್ ಟೂತ್ಬ್ರಷ್ಗಳಿಗೂ ಅನ್ವಯಿಸುತ್ತದೆ. ಎಲೆಕ್ಟ್ರಿಕ್ ಬ್ರಷ್ ಬಳಸುವವರು ಸಂಪೂರ್ಣ ಸಾಧನವನ್ನು ಬದಲಾಯಿಸುವ ಅಗತ್ಯವಿಲ್ಲ. ಅದರ ಬ್ರಷ್ ಹೆಡ್ ಬದಲಾಯಿಸಿದರೆ ಸಾಕು.
ದಿನನಿತ್ಯ ಬಳಕೆಯಿಂದ ಬ್ರಷ್ನ ನಾರುಗಳು ಕ್ರಮೇಣ ಸವೆದು, ಬಾಗಿಕೊಳ್ಳುತ್ತವೆ. ಇದರಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಕಡಿಮೆಯಾಗಬಹುದು. ಹೀಗಾಗಿ ನಿಗದಿತ ಅವಧಿಗೂ ಮುನ್ನವೇ ಬ್ರಷ್ ಸವೆದಿದ್ದರೆ ಅದನ್ನು ಬದಲಾಯಿಸುವುದು ಒಳ್ಳೆಯದು.
ಟೂತ್ಬ್ರಷ್ ಬದಲಾಯಿಸಬೇಕೆಂದು ಸೂಚಿಸುವ ಲಕ್ಷಣಗಳು:
- ಬ್ರಷ್ನ ನಾರುಗಳು ಪಕ್ಕಕ್ಕೆ ಬಾಗಿಕೊಂಡಿದ್ದರೆ ಅಥವಾ ಹರಡಿಕೊಂಡಿದ್ದರೆ ಹೊಸ ಬ್ರಷ್ ಬಳಸಿ.
- ಬ್ರಷ್ನ ನಾರುಗಳು ಮುರಿಯುತ್ತಿದ್ದರೆ ಅಥವಾ ಉದುರುತ್ತಿದ್ದರೆ ಬದಲಾಯಿಸಿ.
- ಹಲ್ಲುಜ್ಜಿದರೂ ಹಲ್ಲುಗಳು ಸರಿಯಾಗಿ ಸ್ವಚ್ಛವಾಗುತ್ತಿಲ್ಲ ಎನಿಸಿದರೆ ಬ್ರಷ್ನ ಸ್ಥಿತಿ ಪರಿಶೀಲಿಸಿ.
- ಮೂರುರಿಂದ ನಾಲ್ಕು ತಿಂಗಳು ಪೂರ್ಣಗೊಳ್ಳುವ ಮೊದಲೇ ಬ್ರಷ್ ಸವೆದಿದ್ದರೂ ಬದಲಾಯಿಸಿ.
ಟೂತ್ಬ್ರಷ್ ಬಳಸುವಾಗ ಈ ಜಾಗ್ರತೆ ಇರಲಿ:
ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ಎರಡು ಬಾರಿ ಫ್ಲೋರೈಡ್ ಇರುವ ಟೂತ್ಪೇಸ್ಟ್ ಬಳಸಿ ಕನಿಷ್ಠ ಎರಡು ನಿಮಿಷ ಹಲ್ಲುಜ್ಜಬೇಕು.
ಹಲ್ಲುಜ್ಜಿದ ನಂತರ ಬ್ರಷ್ ಅನ್ನು ಸ್ವಚ್ಛ ನೀರಿನಿಂದ ತೊಳೆದು, ನೇರವಾಗಿ ನಿಲ್ಲಿಸಿ ಗಾಳಿ ಆಡುವ ಸ್ಥಳದಲ್ಲಿ ಒಣಗಲು ಬಿಡಬೇಕು. ಟೂತ್ಬ್ರಷ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಬ್ರಷ್ಗಳನ್ನು ಒಂದಕ್ಕೊಂದು ತಾಗದಂತೆ ಪ್ರತ್ಯೇಕವಾಗಿ ಇಡುವುದು ಉತ್ತಮ.
ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಪ್ರತಿಯೊಬ್ಬರೂ ಕಡ್ಡಾಯವಾಗಿ ಟೂತ್ಬ್ರಷ್ ಬದಲಾಯಿಸಬೇಕು ಎಂಬುದಕ್ಕೆ ಸ್ಪಷ್ಟವಾದ ವೈಜ್ಞಾನಿಕ ಆಧಾರವಿಲ್ಲ. ಆದರೆ ಬ್ರಷ್ ಹಾಳಾಗಿದ್ದರೆ ಹೊಸದನ್ನು ಬಳಸುವುದು ಉತ್ತಮ.
ಒಟ್ಟಿನಲ್ಲಿ, ಸರಿಯಾದ ಸಮಯಕ್ಕೆ ಟೂತ್ಬ್ರಷ್ ಬದಲಾಯಿಸುವುದು ಮತ್ತು ಪ್ರತಿದಿನ ಸರಿಯಾದ ವಿಧಾನದಲ್ಲಿ ಹಲ್ಲುಜ್ಜುವುದು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.










