ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಕೀಯ ನೇಮಕಾತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮೊದಲ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಸುಮಾರು 1,500 ಪುಟಗಳ ಚಾರ್ಜ್ಶೀಟ್ನಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಉಲ್ಲೇಖಿಸಲಾಗಿದೆ.
ದೋಷಾರೋಪ ಪಟ್ಟಿಯಲ್ಲಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ, ಅಭ್ಯರ್ಥಿಗಳಿಗೆ ತರಬೇತಿ ನೀಡಲು ವಿಲ್ಲಾಗಳನ್ನು ಬುಕ್ ಮಾಡಿದ್ದು, ಅಕ್ರಮ ಹಣದ ವಹಿವಾಟು ಸೇರಿದಂತೆ ಹಲವು ಅಂಶಗಳನ್ನು ವಿವರಿಸಲಾಗಿದೆ.
ವಿಲ್ಲಾಗಳಲ್ಲಿ 20 ಅಭ್ಯರ್ಥಿಗಳಿಗೆ ತರಬೇತಿ!
ಚಾರ್ಜ್ಶೀಟ್ನ ಪ್ರಕಾರ, ಜನವರಿ 8 ಮತ್ತು 9ರಂದು ಹಲವು ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು. ಆರ್ಕಿಡ್ ನಿರ್ವಾಣ ಸೇರಿದಂತೆ ವಿವಿಧ ವಿಲ್ಲಾಗಳಲ್ಲಿ ಒಟ್ಟು 20 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು ಎನ್ನಲಾಗಿದೆ.
ಜನವರಿ 7ರಂದು ಎಚ್ಪಿ ಪೆನ್ಡ್ರೈವ್ ಮೂಲಕ ಗ್ಯಾನೇಂದ್ರ ಕುಮಾರ್ ಅವರು ಬಸವರಾಜ್ ಕನ್ನಾಳೆಗೆ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೀಡಿದ್ದರು ಎಂದು ED ಆರೋಪಿಸಿದೆ. ಎರಡು ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದ 80 ಅಂಕಗಳ ಪ್ರಶ್ನೆಗಳನ್ನು ಪೆನ್ಡ್ರೈವ್ನಲ್ಲಿ ಹಾಕಿಕೊಡಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಕಚೇರಿಯ ಟ್ಯಾಬ್ಲೆಟ್ನಲ್ಲಿ ಪ್ರಶ್ನೆಪತ್ರಿಕೆ ನಕಲು!
ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನೇ ಗ್ಯಾನೇಂದ್ರ ಕುಮಾರ್ ಮತ್ತು ಬಸವರಾಜ್ ಕನ್ನಾಳೆ ನಕಲು ಮಾಡಿದ್ದರು ಎಂಬ ಆರೋಪವಿದೆ. ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್ನಲ್ಲಿ ಪ್ರಶ್ನೆಪತ್ರಿಕೆಯನ್ನು ನಕಲು ಮಾಡಲಾಗಿತ್ತು. ಬಳಿಕ ಆ ಟ್ಯಾಬ್ಲೆಟ್ ಯಾರ ಕೈಗೂ ಸಿಗಬಾರದು ಎಂಬ ಉದ್ದೇಶದಿಂದ ಅದೇ ದಿನ ಅದನ್ನು ಪುಡಿಪುಡಿ ಮಾಡಿ ಬಿಸಾಡಲಾಗಿತ್ತು ಎಂದು ED ಆರೋಪಿಸಿದೆ.
ಇನ್ನು ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಮಾತ್ರ ಪ್ರಶ್ನೆಪತ್ರಿಕೆ ನೀಡುವುದಾಗಿ ಕನ್ನಾಳೆ ಗಂಗ್ವಾರ್ಗೆ ಭರವಸೆ ನೀಡಿದ್ದ ಎನ್ನಲಾಗಿದೆ. ಆರಂಭದಲ್ಲಿ 80 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಕನ್ನಾಳೆ, ಬಳಿಕ ಅದನ್ನು 40 ಲಕ್ಷ ರೂಪಾಯಿಗೆ ಇಳಿಸಿದ್ದ ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
1.70 ಕೋಟಿ ಹಣದ ವಹಿವಾಟು!
ಈ ಪ್ರಕರಣದಲ್ಲಿ ಗ್ಯಾನೇಂದ್ರ ಕುಮಾರ್ ಅವರು ಒಟ್ಟು 1.70 ಕೋಟಿ ರೂಪಾಯಿಗಳನ್ನು ಕನ್ನಾಳೆ ಬಳಿ ಪಡೆದಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 2025ರಲ್ಲಿ ಗ್ಯಾನೇಂದ್ರ ಅವರು ತಮ್ಮ ಅತ್ತಿಗೆಗೆ 15.39 ಲಕ್ಷ ರೂಪಾಯಿ ಹಾಗೂ ಸಹೋದರನ ಬ್ಯಾಂಕ್ ಖಾತೆಗೆ 10.94 ಲಕ್ಷ ರೂಪಾಯಿ ವರ್ಗಾಯಿಸಿದ್ದರು ಎನ್ನಲಾಗಿದೆ.
ಅಕ್ರಮದಿಂದ ಬಂದ ಹಣವನ್ನು ಸ್ವಂತ ಹಣವೆಂದು ಬಿಂಬಿಸಲು ಹಲವು ಪ್ರಯತ್ನಗಳನ್ನು ನಡೆಸಿರುವ ಆರೋಪವೂ ಇದೆ. ಅಧಿಕಾರಿಯ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ED ತಿಳಿಸಿದೆ.
ಆಯ್ಕೆ ಪಟ್ಟಿಯಲ್ಲೂ ಅಕ್ರಮದ ಆರೋಪ:
ಇಬ್ಬರು ಪಶುವೈದ್ಯಾಧಿಕಾರಿ ಅಭ್ಯರ್ಥಿಗಳ ಹೆಸರುಗಳೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿವೆ. 1:3 ಅನುಪಾತದಲ್ಲಿ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿತ್ತು ಎನ್ನಲಾಗಿದೆ. ಈ ಅಕ್ರಮದಲ್ಲಿ KPSCಯ ಇತರ ಅಧಿಕಾರಿಗಳೂ ಭಾಗಿಯಾಗಿರುವ ಶಂಕೆಯನ್ನು ಚಾರ್ಜ್ಶೀಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಅಕ್ರಮದಿಂದ ಬಂದ ಹಣವನ್ನು ಉಮೇಶ್ ಮತ್ತು ಓಂಕಾರ್ ಎಂಬುವವರಿಗೂ ವರ್ಗಾಯಿಸಲಾಗಿದೆ ಎಂದು ED ಆರೋಪಿಸಿದೆ. ಒಟ್ಟಿನಲ್ಲಿ, KPSC ಪಶುವೈದ್ಯಕೀಯ ನೇಮಕಾತಿ ಹಗರಣದ ತನಿಖೆಯಲ್ಲಿ 1,500 ಪುಟಗಳ ಮೊದಲ ಚಾರ್ಜ್ಶೀಟ್ ಹಲವು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದೆ.









