ರಾಮನಗರ: ದೇವಸ್ಥಾನ ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ, ಅದು ಇಡೀ ಸಮಾಜಕ್ಕೆ ಸೇರಿದ್ದು. ದೇವಾಲಯಕ್ಕೆ ಪ್ರವೇಶ ನಿರಾಕರಿಸಿ ಬೀಗ ಹಾಕಿರುವುದು ಸರಿಯಾದ ಕ್ರಮವಲ್ಲ. ಇಂತಹ ಘಟನೆಗಳನ್ನು ಯಾರೂ ಒಪ್ಪುವುದಿಲ್ಲ ಎಂದು ಸಚಿವ ಹೆಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.

ರಾಮನಗರದ ಕೂಟಗಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾರೋಹಳ್ಳಿ ತಾಲೂಕಿನ ದೊಡ್ಡಕುರುಬರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ದೇವಾಲಯ ಪ್ರವೇಶ ನಿರಾಕರಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀಗ ಹಾಕಿದ ಘಟನೆಗೆ ಪ್ರತಿಕ್ರಿಯಿಸಿದರು.
ದೇವಾಲಯ ಪ್ರವೇಶ ನಿರಾಕರಣೆ ಘಟನೆ ಖಂಡನೀಯ
ದೇವಸ್ಥಾನಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಬೇಕು. ಯಾರೋ ಒಬ್ಬ ಕಿಡಿಗೇಡಿ ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಇದೆ. ಈ ಘಟನೆ ಖಂಡನೀಯ ಎಂದು ನಮ್ಮ ಶಾಸಕರೂ ಈಗಾಗಲೇ ಹೇಳಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲೂ ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಸಚಿವರು ತಿಳಿಸಿದರು.
ಮೆಟ್ರೋ ಅನುದಾನ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ತಿರುಗೇಟು
ಇದೇ ವೇಳೆ ಮೆಟ್ರೋ ಅನುದಾನದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ವಾಕ್ಸಮರದ ಬಗ್ಗೆಯೂ ಮಾತನಾಡಿದ ಸಚಿವರು, ಜಟಾಪಟಿ ಮಾಡುತ್ತಿರುವುದು ಕಾರ್ಯಕರ್ತರೇ ಹೊರತು ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಗಳಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸುವುದಾಗಿ ಪ್ರಧಾನಿ ಹೇಳಿದ್ದಾರೆ ಅಷ್ಟೇ. ರಾಜ್ಯದ ಅನುದಾನದ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ಇಲ್ಲಿ ಕುಳಿತು ಜಟಾಪಟಿ ಮಾಡುವ ಬದಲು ಕೇಂದ್ರದ ಬಳಿ ಹೋಗಿ ಹೋರಾಟ ಮಾಡಲಿ. ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಾದ ಹಣವನ್ನು ಬಿಡುಗಡೆ ಮಾಡಿಸಲಿ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.
ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೋದಿ ಅವರ ಬಳಿ ಮಾತನಾಡಲು ಸಿದ್ಧರಿಲ್ಲ. ಅಷ್ಟಕ್ಕೂ ಮೋದಿಯವರಿಗೆ ಇವರ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸೋಮಣ್ಣಗೆ ಭೂಸ್ವಾಧೀನದ ಜವಾಬ್ದಾರಿ ಕೊಡುವಂತೆ ಸವಾಲು
ಹೆಜ್ಜಾಲ-ಚಾಮರಾಜನಗರ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಆರೋಪಕ್ಕೂ ಬಾಲಕೃಷ್ಣ ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಯಾರು ಹೇಳಿದ್ದಾರೆ? ಸೋಮಣ್ಣ ಅವರು ನನಗೆ ಜವಾಬ್ದಾರಿ ನೀಡಲಿ. ನಾನೇ ಮುಂದೆ ನಿಂತು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಕೊಡುತ್ತೇನೆ. ಸುಮ್ಮನೆ ಕಾಟಾಚಾರದ ಮಾತುಗಳನ್ನಾಡಬಾರದು ಎಂದು ಹೇಳಿದರು.
ಕೇಂದ್ರ ಸರ್ಕಾರ ಹಣ ನೀಡಲು ಸಿದ್ಧವಿದೆ, ಆದರೆ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡುತ್ತಿಲ್ಲ ಎಂದರೆ ಅದರ ಅರ್ಥವೇನು ಎಂದು ಪ್ರಶ್ನಿಸಿದ ಅವರು, ಸೋಮಣ್ಣ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ತೋರಿಸಲಿ ಎಂದು ಆಗ್ರಹಿಸಿದರು.









