ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ.

ಹಳದಿ ಮಾರ್ಗದಲ್ಲಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬಿಎಂಆರ್ಸಿಎಲ್ 13ನೇ ರೈಲನ್ನು ಸೇರ್ಪಡೆಗೊಳಿಸಲು ಮುಂದಾಗಿದೆ. ನವೆಂಬರ್ 16ರಿಂದ ಆರ್.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭವಾಗಲಿದೆ.
ಇದುವರೆಗೆ ಈ ಮಾರ್ಗದಲ್ಲಿ 12 ರೈಲುಗಳು ಸಂಚರಿಸುತ್ತಿದ್ದವು. ಇದೀಗ ಮತ್ತೊಂದು ರೈಲು ಸೇರ್ಪಡೆಯಾಗುವುದರಿಂದ ಒಟ್ಟು 13 ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ. ಇದರ ಪರಿಣಾಮವಾಗಿ ವಾರದ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ನಲ್ಲಿ ಪ್ರತಿ 5 ನಿಮಿಷ 30 ಸೆಕೆಂಡ್ಗೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ. ಈ ಹಿಂದೆ ಪ್ರತಿ 6 ನಿಮಿಷಕ್ಕೊಮ್ಮೆ ರೈಲುಗಳು ಲಭ್ಯವಿದ್ದವು.
ಉಳಿದ ಸಮಯದಲ್ಲಿ ಅಂದರೆ ನಾನ್-ಪೀಕ್ ಅವರ್ನಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸಂಚಾರ ಇರಲಿದೆ. ಶನಿವಾರ ಮತ್ತು ಭಾನುವಾರವೂ ದಿನವಿಡೀ ಇದೇ 10 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.
ಆದರೆ ಪ್ರಯಾಣಿಕರು ಗಮನಿಸಬೇಕಾದ ಸಂಗತಿಯೆಂದರೆ, ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಿಂಕ್ ಲೈನ್ ಮೆಟ್ರೋದಲ್ಲಿ ಪ್ರಯಾಣಿಸಿ ಗಮನ ಸೆಳೆದಿದ್ದರು. ಕಾಳೇನ ಅಗ್ರಹಾರದಿಂದ ಸದ್ದುಗುಂಟೆ ಪಾಳ್ಯದವರೆಗೆ ಸಂಚರಿಸಿ, ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿ ಸೆಲ್ಫಿಗೂ ಪೋಸ್ ನೀಡಿದ್ದರು. ಇದೀಗ ಯೆಲ್ಲೋ ಲೈನ್ನಲ್ಲಿ ರೈಲುಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಬೆಂಗಳೂರಿನ ಮೆಟ್ರೋ ಸೇವೆಗೆ ಮತ್ತಷ್ಟು ಬಲ ನೀಡಲಿದೆ.










