ಮನಿಲಾ: ಫಿಲಿಪೈನ್ಸ್ನ ರಾಜಧಾನಿ ಮನಿಲಾದಲ್ಲಿರುವ ಐತಿಹಾಸಿಕ ಗುರುದ್ವಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಗುರುದ್ವಾರದ ಪುನರ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಖ್ ಸಮುದಾಯದ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ಅವರು, ಗುರುದ್ವಾರದ ಆಧ್ಯಾತ್ಮಿಕ ಮಹತ್ವವನ್ನು ಸ್ಮರಿಸಿದ್ದಾರೆ.
ಗುರುದ್ವಾರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಈ ಸ್ಥಳವು ಅಪಾರ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ಎಂದು ಹೇಳಿದರು. ಗುರು ಸಾಹಿಬ್ ಅವರ ಬೋಧನೆಗಳಿಂದ ಪ್ರೇರಣೆ ಪಡೆದ ಸಿಖ್ ಸಮುದಾಯವು ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಐತಿಹಾಸಿಕ ಗುರುದ್ವಾರಕ್ಕೆ ಭೇಟಿ ನೀಡುವ ಅವಕಾಶ ದೊರೆತಿರುವುದಕ್ಕೆ ತಾವು ಧನ್ಯರೆಂದು ಭಾವಿಸುವುದಾಗಿ ತಿಳಿಸಿದರು.
1901ರಲ್ಲಿ ಸ್ಥಾಪನೆಯಾದ ಐತಿಹಾಸಿಕ ಗುರುದ್ವಾರ
ಮನಿಲಾದಲ್ಲಿರುವ ಈ ಗುರುದ್ವಾರವು 1901ರಲ್ಲಿ ಸ್ಥಾಪನೆಯಾಗಿದ್ದು, 1903ರಲ್ಲಿ ಔಪಚಾರಿಕವಾಗಿ ಸಂಘಟಿತ ಸಂಸ್ಥೆಯಾಗಿ ರೂಪುಗೊಂಡಿತು. ಬಳಿಕ 1924ರಲ್ಲಿ ‘ಖಲ್ಸಾ ದಿವಾನ್’ ಹೆಸರಿನಲ್ಲಿ ನೋಂದಣಿಯಾಯಿತು.
ಇದು ಮನಿಲಾದ ಅತ್ಯಂತ ಹಳೆಯ ಗುರುದ್ವಾರಗಳಲ್ಲಿ ಒಂದಾಗಿದ್ದು, ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಅಲ್ಲಿನ ಸಿಖ್ ಸಮುದಾಯ ಮಾತ್ರವಲ್ಲದೆ ಇತರ ಸಮುದಾಯಗಳಿಗೂ ಸೇವೆ ಸಲ್ಲಿಸುತ್ತಿದೆ.
ಭಾರತೀಯ-ಸಿಖ್ ಸಮುದಾಯ ಮತ್ತು ಫಿಲಿಪೈನ್ಸ್ನ ಸ್ಥಳೀಯ ಸಮಾಜದ ನಡುವಿನ ಸಂಬಂಧವನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿಯೂ ಈ ಗುರುದ್ವಾರ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ಮೋದಿ ಅವರ ಭೇಟಿ ಹಾಗೂ ಪುನರ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಈ ಐತಿಹಾಸಿಕ ಧಾರ್ಮಿಕ ಕೇಂದ್ರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.








