ಮುಂಬೈ: ಖಾಸಗಿ ವಲಯದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್ನ ಆಡಳಿತ ಚುಕ್ಕಾಣಿ ಇನ್ಮುಂದೆ ಅನುಭವಿ ಬ್ಯಾಂಕರ್ ಉದಯ ಕುಮಾರ್ ಹೆಬ್ಬಾರ್ ಅವರ ಕೈ ಸೇರಲಿದೆ.
ಬ್ಯಾಂಕ್ನ ನೂತನ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಗಿ ಅವರನ್ನು ನೇಮಕ ಮಾಡಲಾಗಿದೆ. ಬ್ಯಾಂಕ್ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಷೇರು ವಿನಿಮಯ ಕೇಂದ್ರಗಳಿಗೂ ಅಧಿಕೃತ ಮಾಹಿತಿ ನೀಡಲಾಗಿದೆ. ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಹೆಚ್ಚುವರಿ ನಿರ್ದೇಶಕ, ಪೂರ್ಣಾವಧಿ ನಿರ್ದೇಶಕ ಹಾಗೂ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿಯೂ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈ ನೇಮಕಾತಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 16ರಂದು ಹಸಿರು ನಿಶಾನೆ ನೀಡಿದೆ.
ನಾಲ್ಕು ದಶಕಗಳ ಬ್ಯಾಂಕಿಂಗ್ ಅನುಭವ:
ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕ್ಷೇತ್ರದಲ್ಲಿ 40 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಉದಯ ಕುಮಾರ್ ಹೆಬ್ಬಾರ್, ಕಾರ್ಪೊರೇಷನ್ ಬ್ಯಾಂಕ್ ಮೂಲಕ ವೃತ್ತಿಜೀವನ ಆರಂಭಿಸಿದ್ದರು. ಗ್ರಾಮೀಣ ಹಾಗೂ ನಗರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು ಒಂದು ದಶಕ ಸೇವೆ ಸಲ್ಲಿಸಿದ ಬಳಿಕ 1995ರಲ್ಲಿ ಐಸಿಐಸಿಐ ಬ್ಯಾಂಕ್ ಸೇರಿದ್ದರು.
ಅಲ್ಲಿ 12 ವರ್ಷಗಳ ಕಾಲ ಕಾರ್ಪೊರೇಟ್ ಕ್ರೆಡಿಟ್, ಪಾವತಿ ಕಾರ್ಯಾಚರಣೆ, ಗ್ರಾಮೀಣ ಮತ್ತು ಸೂಕ್ಷ್ಮ ಬ್ಯಾಂಕಿಂಗ್ ಹಾಗೂ ಕೃಷಿ ವ್ಯವಹಾರ ವಿಭಾಗಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. 2007ರಲ್ಲಿ ಬಾರ್ಕ್ಲೇಸ್ ಇಂಡಿಯಾದ ವಾಣಿಜ್ಯ ಮತ್ತು ಪಾವತಿ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ಕ್ರೆಡಿಟ್ಆಕ್ಸೆಸ್ ಗ್ರಾಮೀಣ್ ಬೆಳವಣಿಗೆಯಲ್ಲೂ ಕೊಡುಗೆ:
2010ರಲ್ಲಿ ಕ್ರೆಡಿಟ್ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್ ಸಂಸ್ಥೆಗೆ ಸಿಇಒ ಆಗಿ ಸೇರ್ಪಡೆಯಾದ ಹೆಬ್ಬಾರ್, 2015ರಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕಗೊಂಡಿದ್ದರು. ಅವರ ಅಧಿಕಾರಾವಧಿಯಲ್ಲಿ 2018ರಲ್ಲಿ ಸಂಸ್ಥೆಯ ಐಪಿಒ ಹಾಗೂ 2020ರಲ್ಲಿ ಕ್ಯೂಐಪಿ ಮೂಲಕ ಬಂಡವಾಳ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2025ರ ಜೂನ್ 25ರಂದು ಕಾರ್ಯನಿರ್ವಾಹಕ ಹುದ್ದೆಯಿಂದ ನಿವೃತ್ತರಾದ ಅವರು, ಬಳಿಕ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮುಂದುವರಿದಿದ್ದರು.
ಕುಂದಾಪುರದ ಹೆಬ್ಬಾರ್ಗೆ ಹೊಸ ಜವಾಬ್ದಾರಿ;
ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ಉದಯ ಕುಮಾರ್ ಹೆಬ್ಬಾರ್ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ನ CAIIB ಅರ್ಹತೆ ಹೊಂದಿರುವ ಅವರು, ಅಮೆರಿಕದ ವಾಂಡರ್ಬಿಲ್ಟ್ ವಿಶ್ವವಿದ್ಯಾಲಯ ಮತ್ತು BAI ಜಂಟಿಯಾಗಿ ನೀಡುವ ಬ್ಯಾಂಕಿಂಗ್ ಕಾರ್ಯಾಚರಣೆ ಹಾಗೂ ತಂತ್ರಜ್ಞಾನ ಪದವಿಯನ್ನೂ ಪೂರ್ಣಗೊಳಿಸಿದ್ದಾರೆ.
ದೀರ್ಘಕಾಲದ ಬ್ಯಾಂಕಿಂಗ್ ಅನುಭವ, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ನಿರ್ವಹಿಸಿದ ಉನ್ನತ ಹುದ್ದೆಗಳ ಹಿನ್ನೆಲೆಯೊಂದಿಗೆ ಕರ್ಣಾಟಕ ಬ್ಯಾಂಕ್ನ ನೇತೃತ್ವ ವಹಿಸಿಕೊಳ್ಳುತ್ತಿರುವ ಹೆಬ್ಬಾರ್ ಅವರ ಮುಂದಿನ ಕಾರ್ಯತಂತ್ರದತ್ತ ಈಗ ಗಮನ ನೆಟ್ಟಿದೆ.









