ಶಿವಮೊಗ್ಗ: ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ತಾವು ಸಾವಿರಾರು ರೂಪಾಯಿ ವಿಮೆ ಕಂತು ಪಾವತಿಸಿದ್ದರೂ ಸೂಕ್ತ ಪರಿಹಾರ ಸಿಗುತ್ತಿಲ್ಲ, ಕಟ್ಟಿದ ವಿಮೆ ಹಣವೂ ವಾಪಸ್ ಬರುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಬೆಳೆ ವಿಮೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಶರಾವತಿ ಹಿನ್ನೀರು ಪ್ರದೇಶದ ಕರೂರು, ಬಾರಂಗಿ ಹಾಗೂ ನಿಟ್ಟೂರು ವ್ಯಾಪ್ತಿಯ ಸಾವಿರಾರು ರೈತರು ಭಾಗವಹಿಸಿದ್ದಾರೆ.
ರೈತರು ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್ನಿಂದ ಬಸ್ ನಿಲ್ದಾಣ, ಗೋಪಿ ಸರ್ಕಲ್ ಮಾರ್ಗವಾಗಿ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು. ಈ ವೇಳೆ ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಒಂದೇ ಸರ್ವೇ ನಂಬರ್ನ ರೈತರಿಗೂ ಪರಿಹಾರದಲ್ಲಿ ವ್ಯತ್ಯಾಸ
ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಪಂಚಾಯಿತಿಯಿಂದ ಪಂಚಾಯಿತಿಗೆ ಸಾವಿರಾರು ರೂಪಾಯಿಗಳ ವ್ಯತ್ಯಾಸ ಕಂಡುಬರುತ್ತಿದೆ. ಒಂದೇ ಗ್ರಾಮದ ಒಂದೇ ಸರ್ವೇ ನಂಬರ್ನ ಜಮೀನು ಹೊಂದಿರುವ ರೈತರಿಗೂ ವಿಭಿನ್ನ ಮೊತ್ತದ ಪರಿಹಾರ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮಳೆಮಾಪನ ಕೇಂದ್ರಗಳ ಕಾರ್ಯವೈಖರಿ ಹಾಗೂ ಅಧಿಕಾರಿಗಳ ಲೋಪದೋಷಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಸಂಸದ, ಮಾಜಿ ಸಚಿವರ ಬೆಂಬಲ
ರೈತರ ಪ್ರತಿಭಟನೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗವಹಿಸಿ ಬೆಂಬಲ ಸೂಚಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.









