ವಿಜಯಪುರ: ಕಬ್ಬಿಗೆ ರೈತರು ₹3,600 ದರದ ಬೇಡಿಕೆ ಇಟ್ಟಿದ್ದರು. ಆದರೆ ರೈತರ ಹಿತದೃಷ್ಟಿಯಿಂದ ಟನ್ಗೆ ₹3,700 ನೀಡುತ್ತಿದ್ದೇವೆ. ಬೇಡಿಕೆಗಿಂತ ಹೆಚ್ಚಿನ ದರವನ್ನು ನಿಗದಿ ಮಾಡಿದ್ದು, ಭೀಮಾತೀರದ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕಬ್ಬಿಗೆ ಬೇಡಿಕೆಗಿಂತ ಹೆಚ್ಚಿನ ದರ ನೀಡಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂದು ಹೇಳಿದರು. ಬರ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ಟನ್ಗೆ ₹3,700 ದರ ನೀಡಲಾಗುತ್ತಿದೆ. ಈ ನಿರ್ಧಾರ ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ ಎಂದರು.
ನಾನೂ ರೈತನಾಗಿದ್ದು, ರೈತರ ಸಂಕಷ್ಟಗಳ ಅರಿವಿದೆ. ಅದೇ ರೀತಿ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳೂ ಗೊತ್ತಿವೆ. ಮಳೆಯ ಕೊರತೆಯಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಎಲ್ಲ ವಿಚಾರಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಕಬ್ಬಿನ ದರ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.
ಭೀಮಾ ನದಿಗೆ 7 ಟಿಎಂಸಿ ನೀರು ಬಿಡುವಂತೆ ಮನವಿ
ಭೀಮಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಯಶವಂತರಾಯಗೌಡ ಪಾಟೀಲ್ ಹೇಳಿದರು. ದಸೂರು, ಉಮರಜ್ ಹಾಗೂ ನಿವರಗಿ ಭಾಗದವರೆಗೆ ನೀರು ಹರಿಯಬೇಕಿತ್ತು. ಆದರೆ ಗಡಿಯ ಬ್ಯಾರೇಜ್ನಲ್ಲಿ ನೀರನ್ನು ತಡೆಹಿಡಿದಿರುವುದು ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲಿ ಇನ್ನೂ ಸುಮಾರು 27 ಟಿಎಂಸಿ ನೀರು ಲಭ್ಯವಿದ್ದು, ಇಂಡಿ ಬ್ಯಾರೇಜ್ಗೆ ನೀರು ತಲುಪಲು 7 ಟಿಎಂಸಿ ಅಗತ್ಯವಿದೆ. ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡಿದ್ದು, ಡಿಸೆಂಬರ್ ಹಾಗೂ ಮಾರ್ಚ್ನಲ್ಲಿ ನೀರು ಹರಿಸುವುದಾಗಿ ತಿಳಿಸಿದ್ದಾರೆ. ಭೀಮಾ ನದಿಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.









