ನವದೆಹಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ವಾರಂಟ್ (NBW) ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆಗೆ ಪದೇಪದೇ ಗೈರಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.
‘ಬಿಜೆಪಿ ಐಟಿ ಸೆಲ್ ಭಾಗ 2’ ಎಂಬ ಶೀರ್ಷಿಕೆಯ ವಿಡಿಯೋಗೆ ಸಂಬಂಧಿಸಿದಂತೆ ವಿಕಾಸ್ ಸಾಂಕೃತ್ಯಾಯನ್ ಅಲಿಯಾಸ್ ವಿಕಾಸ್ ಪಾಂಡೆ ಅವರು 2019ರಲ್ಲಿ ಧ್ರುವ್ ರಾಠಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಹಲವು ವರ್ಷಗಳಿಂದ ನಡೆಯುತ್ತಿದ್ದು, ಧ್ರುವ್ ರಾಠಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.
ಏನಿದು ಪ್ರಕರಣ?
ಧ್ರುವ್ ರಾಠಿ ‘ಬಿಜೆಪಿ ಐಟಿ ಸೆಲ್ ಭಾಗ 2’ ಎಂಬ ಶೀರ್ಷಿಕೆಯ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಈ ವಿಡಿಯೋದಲ್ಲಿ ತಮ್ಮ ವಿರುದ್ಧ ಸುಳ್ಳು ಹಾಗೂ ಮಾನನಷ್ಟಕರ ಆರೋಪಗಳನ್ನು ಮಾಡಲಾಗಿದೆ ಎಂದು ವಿಕಾಸ್ ಸಾಂಕೃತ್ಯಾಯನ್ ದೂರು ನೀಡಿದ್ದರು.
ಈ ಹಿಂದೆ ಅಕ್ಟೋಬರ್ನಲ್ಲಿ ನ್ಯಾಯಾಲಯ ಧ್ರುವ್ ರಾಠಿ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿತ್ತು. ಆದರೆ, ಪೊಲೀಸರು ನೋಟಿಸ್ ನೀಡಲು ಅವರ ನಿವಾಸಕ್ಕೆ ತೆರಳಿದಾಗ ಮನೆಗೆ ಬೀಗ ಹಾಕಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಲಾಗಿದೆ.
2019ರಿಂದ ಪ್ರಕರಣದ ವಿಚಾರಣೆ ಬಾಕಿ ಉಳಿದಿದ್ದು, ಧ್ರುವ್ ರಾಠಿ ಭಾರತದಲ್ಲಿರದೆ ಜರ್ಮನಿಯಲ್ಲಿ ವಾಸಿಸುತ್ತಿರುವುದರಿಂದ ವಿಚಾರಣೆ ವಿಳಂಬವಾಗಿದೆ ಎಂದು ವರದಿಯಾಗಿದೆ.
ಅರವಿಂದ್ ಕೇಜ್ರಿವಾಲ್ಗೂ ಸಂಬಂಧಿಸಿದ ಪ್ರಕರಣ
ಇದೇ ವಿಡಿಯೋವನ್ನು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2024ರ ಫೆಬ್ರವರಿಯಲ್ಲಿ ಮರುಟ್ವೀಟ್ ಮಾಡಿದ್ದರು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದ ವಿಕಾಸ್ ಸಾಂಕೃತ್ಯಾಯನ್, ಕೇಜ್ರಿವಾಲ್ ವಿರುದ್ಧವೂ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್ ರದ್ದುಪಡಿಸುವಂತೆ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ (ನಿವೃತ್ತ) ಹಾಗೂ ದೀಪಂಕರ್ ದತ್ತಾ ಅವರ ಪೀಠ ಪ್ರಕರಣದ ವಿಚಾರಣೆಗೆ ತಡೆ ನೀಡಿತ್ತು.
ಮಾನನಷ್ಟಕರ ವಿಷಯವನ್ನು ಮರುಟ್ವೀಟ್ ಮಾಡುವುದರಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗಬಹುದು ಎಂದು ದೆಹಲಿ ಹೈಕೋರ್ಟ್ ಈ ಹಿಂದೆ ಹೇಳಿತ್ತು.









