ಬೆಂಗಳೂರು: ಹಾಸನ ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಸ್ಥಳಾಂತರಿಸುತ್ತಿರುವುದಕ್ಕೆ ಶಾಸಕಿಯೂ ಆಗಿರುವ ನಯನಾ ಮೋಟಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಅಭಿಪ್ರಾಯಕ್ಕೆ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿರುವ ಅವರು, ವಿಧಾನಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿ ತೆರಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಯನಾ ಮೋಟಮ್ಮ, ವಿಧಾನಸಭಾಧ್ಯಕ್ಷರು ಕಚೇರಿಯಲ್ಲಿ ಇಲ್ಲದ ಕಾರಣ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದೇನೆ. ಸ್ಪೀಕರ್ ಅವರು ನಾಳೆ ಬರುತ್ತಾರೆ, ಆಗ ಪತ್ರ ಸಲ್ಲಿಸುವಂತೆ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ. ನಮ್ಮ ಮಾತಿಗೆ ಬೆಲೆ ಇಲ್ಲದಿದ್ದರೆ ನಾವೇಕೆ ಶಾಸಕರಾಗಿರಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅಭಿಪ್ರಾಯ ಕೇಳದೆ ಭದ್ರಾ ಅಭಯಾರಣ್ಯ ಪ್ರದೇಶಕ್ಕೆ ಆನೆಗಳನ್ನು ಸ್ಥಳಾಂತರಿಸಲಾಗುತ್ತಿದೆ. ಈ ಆನೆ ಸ್ಥಳಾಂತರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಆನೆಗಳನ್ನು ಅವು ಬಂದಿರುವ ಪ್ರದೇಶಗಳಿಗೇ ಮರಳಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಆನೆಗಳನ್ನು ಸ್ಥಳಾಂತರಿಸುವ ನಿರ್ಧಾರಕ್ಕೂ ಮುನ್ನ ನಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ನಾವು ವಿರೋಧ ವ್ಯಕ್ತಪಡಿಸುತ್ತೇವೆ ಎಂಬ ಕಾರಣಕ್ಕೆ ನಮ್ಮ ಅಭಿಪ್ರಾಯವನ್ನೇ ಕೇಳಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.
ರಾಜೀನಾಮೆ ಪತ್ರವನ್ನು ತಾಂತ್ರಿಕವಾಗಿ ಯಾವ ರೀತಿಯಲ್ಲಿ ಬರೆಯಬೇಕು ಎಂಬುದನ್ನು ತಿಳಿಸಿದರೆ ಅದೇ ರೀತಿಯಲ್ಲಿ ಸಲ್ಲಿಸುತ್ತೇನೆ ಎಂದ ಅವರು, ಕೊಡಗಿನಲ್ಲಿಯೂ ಇದೇ ರೀತಿಯ ಸಮಸ್ಯೆ ಇದೆ ಎಂದು ಶಾಸಕ ಪೊನ್ನಣ್ಣ ತಿಳಿಸಿದ್ದಾರೆ. ಈ ವಿಚಾರವೂ ಚರ್ಚೆಯಾಗಿದೆ. ಇಡೀ ಬೆಳವಣಿಗೆ ಮುಖ್ಯಮಂತ್ರಿಗಳ ಗಮನದಲ್ಲಿರಬಹುದು. ಆಡಳಿತ ಪಕ್ಷದ ಶಾಸಕರಾಗಿದ್ದರೂ ನಮ್ಮ ಮಾತಿಗೆ ಮನ್ನಣೆ ಇಲ್ಲದಿದ್ದರೆ ಆ ಸ್ಥಾನದಲ್ಲಿರುವುದರಿಂದ ಏನು ಪ್ರಯೋಜನ ಎಂದು ನಯನಾ ಮೋಟಮ್ಮ ಪ್ರಶ್ನಿಸಿದರು.








