ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದ ಪಟ್ಟಣಗೆರೆ ಶೆಡ್ನ ಇಬ್ಬರು ಕೆಲಸಗಾರರು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದಾರೆ. ಈ ಮೂಲಕ ಅವರು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ.
ಪಟ್ಟಣಗೆರೆ ಶೆಡ್ನಲ್ಲಿ ಪಾರ್ಕಿಂಗ್ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಹಾಗೂ ಶೆಡ್ನಲ್ಲಿ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ವಿಜಯ್ ಕುಮಾರ್ ಇಂದು ನ್ಯಾಯಾಲಯದ ವಿಚಾರಣೆ ವೇಳೆ ತಮ್ಮ ಹಿಂದಿನ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಮಾತನಾಡಿದ್ದಾರೆ.
ಕೃತ್ಯ ನಡೆದ ದಿನ ತಾನು ಶೆಡ್ನಲ್ಲಿ ಏನನ್ನೂ ನೋಡಿಲ್ಲ. ಈ ಘಟನೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಮಲ್ಲಿಕಾರ್ಜುನ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಇನ್ನು ವಿಜಯ್ ಕುಮಾರ್ ಕೂಡ, “ನನಗೇನೂ ಗೊತ್ತಿಲ್ಲ. ನಾನು ಕಚೇರಿಯಿಂದ ಹೊರಗೆ ಬಂದೇ ಇಲ್ಲ. ಹೊರಗೆ ನಡೆದ ಘಟನೆಯ ಬಗ್ಗೆ ನನಗೆ ಅರಿವಿಲ್ಲ. ನಾನು ಯಾರನ್ನೂ ನೋಡಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಕಿರಣ್ ಹಾಗೂ ಭದ್ರತಾ ಸಿಬ್ಬಂದಿ ನರೇಂದ್ರ ಸಿಂಗ್ ಕೂಡ ಶೆಡ್ನಲ್ಲಿ ಯಾವುದೇ ಘಟನೆ ನಡೆದಿರುವ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಪ್ರತಿಕೂಲ ಸಾಕ್ಷಿಗಳಾಗಿದ್ದರು. ಇದೀಗ ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಕೂಡ ಹಿಂದಿನ ಹೇಳಿಕೆಗಳಿಂದ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಾಕ್ಷಿಗಳು ಪ್ರಾಸಿಕ್ಯೂಷನ್ಗೆ ಹಿನ್ನಡೆ ಉಂಟುಮಾಡಿದ್ದಾರೆ.
ಸಾಕ್ಷಿಗಳ ಪಾಟಿಸವಾಲಿಗೆ ನ್ಯಾಯಾಲಯದ ಅನುಮತಿ
ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಅವರು ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಹಿನ್ನೆಲೆಯಲ್ಲಿ, ಇಬ್ಬರನ್ನೂ ಪ್ರತಿಕೂಲ ಸಾಕ್ಷಿಗಳೆಂದು ಪರಿಗಣಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಪ್ರತಿಕೂಲ ಸಾಕ್ಷಿಗಳಾದ ಇಬ್ಬರ ಪಾಟಿಸವಾಲು ನಡೆಸಲು ಪ್ರಾಸಿಕ್ಯೂಷನ್ಗೆ ಅವಕಾಶ ನೀಡಿದೆ. ಡಿಸೆಂಬರ್ 3ರಂದು ಪಾಟಿಸವಾಲು ನಡೆಯಲಿದ್ದು, ಪ್ರಕರಣದ ವಿಚಾರಣೆಯನ್ನು ಅಂದಿನ ದಿನಕ್ಕೆ ಮುಂದೂಡಲಾಗಿದೆ.







