ಬೆಂಗಳೂರು: ಆಸ್ತಿ ವಿವಾದ ಹಾಗೂ ಮನೆ ಖಾಲಿ ಮಾಡುವ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಅಣ್ಣನೇ ತನ್ನ ತಂಗಿಯನ್ನು ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನಡೆದಿದೆ.
ಮೀನಾಕ್ಷಿ (39) ಕೊಲೆಯಾದ ಮಹಿಳೆ. ವಕೀಲ ವೃತ್ತಿಯಲ್ಲಿರುವ ಅವರ ಅಣ್ಣ ಜಯರಾಮ್ ಕೊಲೆ ಆರೋಪಿಯಾಗಿದ್ದು, ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೀನಾಕ್ಷಿ ಕಳೆದ ಕೆಲವು ತಿಂಗಳಿಂದ ಪತಿಯಿಂದ ದೂರವಾಗಿದ್ದು, ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಬಂದು ವಾಸವಾಗಿದ್ದರು. ಅಣ್ಣ ಜಯರಾಮ್ ಮನೆಯ ಎದುರಿನ ಶೀಟ್ ಮನೆಯಲ್ಲಿ ಅವರು ನೆಲೆಸಿದ್ದರು. ಆದರೆ, ಆಸ್ತಿ ವಿಚಾರವಾಗಿ ಹಾಗೂ ಶೀಟ್ ಮನೆಯನ್ನು ಖಾಲಿ ಮಾಡುವಂತೆ ಜಯರಾಮ್ ಪದೇಪದೇ ತಂಗಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ನೀರು ಎರಚಿದ ವಿಚಾರಕ್ಕೆ ಗಲಾಟೆ:
ಬುಧವಾರ ಬೆಳಗ್ಗೆ ಸುಮಾರು 11.30ರ ವೇಳೆಗೆ ಜಯರಾಮ್ ಪತ್ನಿ ಕಿಟಕಿಯಿಂದ ನೀರು ಎರಚಿದ ವಿಚಾರವಾಗಿ ಅತ್ತಿಗೆ ಮತ್ತು ನಾದಿನಿ ಮೀನಾಕ್ಷಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶೀಟ್ ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಜಯರಾಮ್ ಪತ್ನಿ ಮೀನಾಕ್ಷಿ ಜೊತೆ ಜಗಳವಾಡಿದ್ದಾರೆ. ಬಳಿಕ ನಡೆದ ಗಲಾಟೆಯ ಬಗ್ಗೆ ಪತಿ ಜಯರಾಮ್ಗೆ ತಿಳಿಸಿದ್ದಾರೆ.
ಪತ್ನಿಯಿಂದ ವಿಚಾರ ತಿಳಿದು ಆಕ್ರೋಶಗೊಂಡ ಜಯರಾಮ್, ಏಕಾಏಕಿ ತಂಗಿಯ ಮನೆಗೆ ನುಗ್ಗಿ ಕ್ರಿಕೆಟ್ ಬ್ಯಾಟ್ನಿಂದ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಮೀನಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಆರೋಪಿ ಜಯರಾಮ್ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಳ್ಳಂದೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಜಯರಾಮ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.







