ಹಾವೇರಿ: ಸಿನಿಮಾ ಚಿತ್ರೀಕರಣಗಳಲ್ಲಿ ಬಳಸುವ ಪ್ರಾಪ್ ಮನಿ ಮಾದರಿಯ ನಕಲಿ ₹500 ನೋಟುಗಳನ್ನು ಬ್ಯಾಂಕ್ ಎಟಿಎಂ ಮೂಲಕ ಚಲಾವಣೆ ಮಾಡಲು ಯತ್ನಿಸಿದ ಪ್ರಕರಣ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಬೆಳಕಿಗೆ ಬಂದಿದೆ.
ಎಟಿಎಂ ನಗದು ಜಮೆ ಯಂತ್ರಕ್ಕೆ ನಕಲಿ ನೋಟುಗಳನ್ನು ಹಾಕಲು ಪ್ರಯತ್ನಿಸಿದ ಇಬ್ಬರು ಆರೋಪಿಗಳನ್ನು ರಾಣೇಬೆನ್ನೂರು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 1,000 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
76 ನಕಲಿ ನೋಟು ಹಾಕುತ್ತಿದ್ದಂತೆ ಅಲರ್ಟ್ ನೀಡಿದ ಎಟಿಎಂ:
ರಾಣೇಬೆನ್ನೂರಿನ ರಾಷ್ಟ್ರೀಯ ಬ್ಯಾಂಕ್ನ ಎಟಿಎಂ ನಗದು ಜಮೆ ಯಂತ್ರಕ್ಕೆ ಆರೋಪಿಗಳು ₹500 ಮುಖಬೆಲೆಯ 76 ನಕಲಿ ನೋಟುಗಳನ್ನು ಜಮೆ ಮಾಡಲು ಯತ್ನಿಸಿದ್ದರು. ಈ ನೋಟುಗಳು ಸಿನಿಮಾ ಚಿತ್ರೀಕರಣದಲ್ಲಿ ಬಳಸುವ ಮಾದರಿಯಲ್ಲಿದ್ದು, ‘ಚಿಲ್ಡ್ರನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂಬ ಹೆಸರನ್ನು ಹೊಂದಿದ್ದವು.
ಎಟಿಎಂ ಯಂತ್ರಕ್ಕೆ ನಕಲಿ ನೋಟುಗಳನ್ನು ಹಾಕುತ್ತಿದ್ದಂತೆ ಅದರ ತಾಂತ್ರಿಕ ವ್ಯವಸ್ಥೆ ಬ್ಯಾಂಕ್ ಸಿಬ್ಬಂದಿಗೆ ಅಲರ್ಟ್ ಸಂದೇಶ ರವಾನಿಸಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಬ್ಬರು ಆರೋಪಿಗಳ ಬಂಧನ:
ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಪಡೆದ ರಾಣೇಬೆನ್ನೂರು ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ರಾಣೇಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದ ಸುರೇಶ್ ಬಿಲ್ಲಾಳ್ ಮತ್ತು ಮಾಲತೇಶ್ ಮೈಲಾರ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಬಳಿಯಿಂದ ₹500 ಮುಖಬೆಲೆಯ ಒಟ್ಟು 1,000 ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನಕಲಿ ನೋಟುಗಳನ್ನು ಎಲ್ಲಿಂದ ತರಲಾಗಿತ್ತು, ಇದರ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









