ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂಬ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಈ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಈಗ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿದೆ. ಡಿಸೆಂಬರ್ 12ರಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸುವುದಾಗಿ ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಘೋಷಿಸಿದ್ದು, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ತಯಾರಿ ನಡೆಸಿದೆ.
ನವೆಂಬರ್ 25ರಂದು ಬೆಂಗಳೂರಿನ ಗಾಂಧಿನಗರದ ಜಯಾನ್ ಹೋಟೆಲ್ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಸೂಕ್ತ ಪಾಲು ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ನಾರಾಯಣ ಗೌಡ ನೀಡಿದ್ದಾರೆ.
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ?
ಐಟಿ ಕಂಪನಿಗಳಲ್ಲಿನ ಉದ್ಯೋಗಾವಕಾಶಗಳ ಕುರಿತು ಕರವೇ ಈಗಾಗಲೇ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಿಸಿದೆ. ನವೆಂಬರ್ 2ರಿಂದ 10 ತಂಡಗಳು ಸುಮಾರು 800ಕ್ಕೂ ಹೆಚ್ಚು ಐಟಿ ಸಂಸ್ಥೆಗಳಿಗೆ ಭೇಟಿ ನೀಡಿವೆ. ಒಟ್ಟು ಉದ್ಯೋಗಿಗಳ ಸಂಖ್ಯೆ ಎಷ್ಟು? ಅವರಲ್ಲಿ ಕನ್ನಡಿಗರು ಎಷ್ಟು ಮಂದಿ? ವಿವಿಧ ಹುದ್ದೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಎಷ್ಟಿದೆ? ಎಂಬ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
ಈ ಅಭಿಯಾನದಲ್ಲಿ ತಾವೂ ಭಾಗವಹಿಸಿದ್ದು, 40ರಿಂದ 50 ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ನಾರಾಯಣ ಗೌಡ ಹೇಳಿದ್ದಾರೆ.
ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಕರವೇ ಮಾಡುತ್ತಿದೆ. ಮಾಹಿತಿ ಸಂಗ್ರಹಿಸಲು ಕಾರ್ಮಿಕ ಇಲಾಖೆ ಪತ್ರ ಬರೆದು ಅನುಮತಿ ಕೇಳಿದ್ದರೂ ಸರ್ಕಾರ ಅನುಮತಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕಂಪನಿಗಳಿಂದ ದೊರೆತ ಮಾಹಿತಿಯ ಪ್ರಕಾರ, ಕನ್ನಡಿಗರಿಗೆ ಕೇವಲ ಶೇ.10ರಿಂದ 18ರಷ್ಟು ಉದ್ಯೋಗಾವಕಾಶವಿದೆ ಎಂಬುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಡಿ.12ರಂದು ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ:
ಡಿಸೆಂಬರ್ 11ರಂದು ಬೆಳಗಾವಿ ಅಧಿವೇಶನ ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಕರವೇ ಬೃಹತ್ ರ್ಯಾಲಿ ಆಯೋಜಿಸಿದೆ. ನ್ಯಾಷನಲ್ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.
ರಾಜ್ಯದ 31 ಜಿಲ್ಲೆಗಳಿಂದ ಕಾರ್ಯಕರ್ತರು ಬಸ್ ಹಾಗೂ ರೈಲುಗಳ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರತಿ ಜಿಲ್ಲೆಯಿಂದ ಸುಮಾರು 30 ಸಾವಿರ ಕಾರ್ಯಕರ್ತರು ಮತ್ತು ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಿಂದ 20ರಿಂದ 25 ಸಾವಿರ ಜನರನ್ನು ಒಗ್ಗೂಡಿಸುವ ಗುರಿಯನ್ನು ಸಂಘಟನೆ ಹೊಂದಿದೆ.
ವಿರೋಧಿಗಳಿಗೆ ನಾರಾಯಣ ಗೌಡ ಖಡಕ್ ಎಚ್ಚರಿಕೆ:
ಕನ್ನಡಿಗರ ಉದ್ಯೋಗ ಮೀಸಲಾತಿ ಹೋರಾಟಕ್ಕೆ ಯಾವುದೇ ಕಂಪನಿ ಅಥವಾ ವ್ಯಕ್ತಿ ಅಡ್ಡಿಪಡಿಸಿದರೂ ಸುಮ್ಮನಿರುವುದಿಲ್ಲ ಎಂದು ನಾರಾಯಣ ಗೌಡ ಎಚ್ಚರಿಸಿದ್ದಾರೆ. ಮಾಹಿತಿ ನೀಡದ ಕಂಪನಿಗಳ ವಿರುದ್ಧ ಆಯಾ ಸ್ಥಳಗಳಲ್ಲೇ ಪ್ರತಿಭಟನೆ ನಡೆಸುವುದಾಗಿಯೂ ಹೇಳಿದ್ದಾರೆ.
ಇನ್ನು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳ ಕುರಿತು ಉದ್ಯಮಿ ಮೋಹನ್ದಾಸ್ ಪೈ ಅವರ ಹೆಸರನ್ನು ಪ್ರಸ್ತಾಪಿಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನೂರು ಮೋಹನ್ದಾಸ್ ಪೈ ಬಂದರೂ ಏನೂ ಮಾಡಲಾಗುವುದಿಲ್ಲ. ಅವರು ರಾಜ್ಯ ಬಿಟ್ಟು ಹೋಗಲ್ಲ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಐಟಿ-ಬಿಟಿ ಸೇರಿದಂತೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂಬ ಕರವೇ ಬೇಡಿಕೆ ಡಿಸೆಂಬರ್ 12ರಿಂದ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.









