ಧಾರವಾಡ: ಹೃದಯಾಘಾತದಿಂದ ಎಲ್ಎಲ್ಬಿ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಮೃತರನ್ನು 22 ವರ್ಷದ ಸಮರ್ಥ್ ದೇಶಪಾಂಡೆ ಎಂದು ಗುರುತಿಸಲಾಗಿದೆ.
ಧಾರವಾಡದ ಹಿರಿಯ ವಕೀಲ ಅನೂಪ್ ದೇಶಪಾಂಡೆ ಅವರ ಪುತ್ರನಾಗಿದ್ದ ಸಮರ್ಥ್, ಎಲ್ಎಲ್ಬಿ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ತಂದೆ ಅನೂಪ್ ದೇಶಪಾಂಡೆ ಅವರು ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಡೆಸುತ್ತಿದ್ದರು.
22ನೇ ವಯಸ್ಸಿನಲ್ಲೇ ಸಮರ್ಥ್ ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಕುಟುಂಬಸ್ಥರು ಹಾಗೂ ಆಪ್ತರಲ್ಲಿ ದುಃಖ ಮೂಡಿಸಿದೆ. ಮೃತರ ಅಂತ್ಯಕ್ರಿಯೆ ಧಾರವಾಡದ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಮಧ್ಯಾಹ್ನ ನಡೆಯಲಿದೆ.









