ಚಳಿಗಾಲ ಆರಂಭವಾಗುತ್ತಿದ್ದಂತೆ ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಣ್ಣನೆಯ ಗಾಳಿ ಮತ್ತು ವಾತಾವರಣದಲ್ಲಿನ ತೇವಾಂಶದ ಕೊರತೆ ಕೇವಲ ಚರ್ಮದ ಮೇಲಷ್ಟೇ ಅಲ್ಲ, ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಕೂದಲು ಒಣಗುವುದು, ನಿರ್ಜೀವವಾಗುವುದು ಹಾಗೂ ಕೂದಲು ಉದುರುವಿಕೆ ಹೆಚ್ಚಾಗುವ ಸಾಧ್ಯತೆ ಇದೆ.
ಚಳಿಗಾಲದಲ್ಲಿ ಕೂದಲಿನ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿ ಇರಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗೆ ಮಾಡಬೇಕು? ಇಲ್ಲಿವೆ ಕೆಲವು ಪ್ರಮುಖ ಸಲಹೆಗಳು.
1. ಕೂದಲನ್ನು ಪದೇ ಪದೇ ತೊಳೆಯಬೇಡಿ
ಕೆಲವರು ಪ್ರತಿದಿನ ಕೂದಲನ್ನು ತೊಳೆದರೆ, ಇನ್ನು ಕೆಲವರು ಎರಡು ಅಥವಾ ಮೂರು ದಿನಗಳಿಗೊಮ್ಮೆ ತೊಳೆಯುತ್ತಾರೆ. ಆದರೆ ಚಳಿಗಾಲದಲ್ಲಿ ಕೂದಲನ್ನು ಅತಿಯಾಗಿ ತೊಳೆಯುವುದರಿಂದ ಅದರಲ್ಲಿರುವ ನೈಸರ್ಗಿಕ ತೈಲಾಂಶ ಕಡಿಮೆಯಾಗಬಹುದು. ಸಾಮಾನ್ಯವಾಗಿ ವಾರಕ್ಕೆ ಎರಡು ಬಾರಿ ಕೂದಲು ತೊಳೆಯುವುದು ಸಾಕಾಗಬಹುದು. ನಿಮ್ಮ ಕೂದಲಿನ ಪ್ರಕಾರ ಮತ್ತು ನೆತ್ತಿಯ ಸ್ಥಿತಿಗೆ ಅನುಗುಣವಾಗಿ ಶಾಂಪೂ ಆಯ್ಕೆ ಮಾಡಿಕೊಳ್ಳುವುದು ಕೂಡ ಮುಖ್ಯ.
2. ಕಂಡಿಷನರ್ ಬಳಸಲು ಮರೆಯದಿರಿ
ಕೂದಲನ್ನು ಶಾಂಪೂ ಬಳಸಿ ತೊಳೆದ ಬಳಿಕ ಕಂಡಿಷನರ್ ಬಳಸುವುದರಿಂದ ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಕಂಡಿಷನರ್ ಆಯ್ಕೆ ಮಾಡುವಾಗ ನಿಮ್ಮ ಕೂದಲಿನ ಸ್ವಭಾವಕ್ಕೆ ಸೂಕ್ತವಾದ ಉತ್ಪನ್ನವನ್ನು ಆರಿಸಿಕೊಳ್ಳಿ. ಕೂದಲಿನ ಉದ್ದ ಮತ್ತು ತುದಿಗಳಿಗೆ ಕಂಡಿಷನರ್ ಹಚ್ಚುವುದು ಉತ್ತಮ. ನೆತ್ತಿಗೆ ನೇರವಾಗಿ ಹಚ್ಚುವುದನ್ನು ತಪ್ಪಿಸಿ.
3. ಅತಿಯಾದ ಬಿಸಿ ನೀರನ್ನು ಬಳಸಬೇಡಿ
ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಆರಾಮ ಸಿಗಬಹುದು. ಆದರೆ ತುಂಬಾ ಬಿಸಿ ನೀರಿನಿಂದ ಕೂದಲು ತೊಳೆಯುವುದು ಒಳ್ಳೆಯದಲ್ಲ. ಇದು ನೆತ್ತಿ ಮತ್ತು ಕೂದಲಿನಲ್ಲಿರುವ ನೈಸರ್ಗಿಕ ತೈಲಾಂಶವನ್ನು ಕಡಿಮೆ ಮಾಡಿ, ಕೂದಲನ್ನು ಒಣಗಿಸಬಹುದು. ಆದ್ದರಿಂದ ಕೂದಲು ತೊಳೆಯಲು ಉಗುರುಬೆಚ್ಚಗಿನ ನೀರನ್ನು ಬಳಸುವುದು ಸೂಕ್ತ.
4. ಹೇರ್ ಡ್ರೈಯರ್ ಬಳಕೆಯನ್ನು ಕಡಿಮೆ ಮಾಡಿ
ಕೂದಲು ತೊಳೆದ ತಕ್ಷಣ ಒಣಗಿಸಲು ಹೇರ್ ಡ್ರೈಯರ್ ಬಳಸುವ ಅಭ್ಯಾಸ ಕೆಲವರಿಗಿರುತ್ತದೆ. ಆದರೆ ಹೇರ್ ಡ್ರೈಯರ್, ಹೇರ್ ಕರ್ಲರ್ ಮತ್ತು ಸ್ಟ್ರೈಟೆನರ್‌ಗಳಿಂದ ಹೊರಬರುವ ಹೆಚ್ಚಿನ ಶಾಖವು ಕೂದಲಿಗೆ ಹಾನಿ ಉಂಟುಮಾಡಬಹುದು. ಆದ್ದರಿಂದ ಇವುಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಟವೆಲ್‌ನಿಂದ ಕೂದಲನ್ನು ನಿಧಾನವಾಗಿ ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ, ನಂತರ ನೈಸರ್ಗಿಕವಾಗಿ ಒಣಗಲು ಬಿಡಿ.
5. ಕೂದಲಿಗೆ ಎಣ್ಣೆ ಹಚ್ಚುವುದನ್ನು ಮರೆಯಬೇಡಿ
ಚಳಿಗಾಲದಲ್ಲಿ ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸೂಕ್ತವಾದ ಕೂದಲಿನ ಎಣ್ಣೆಯನ್ನು ಬಳಸಬಹುದು. ಎಣ್ಣೆ ಹಚ್ಚುವುದರಿಂದ ಕೂದಲಿನ ಒಣತನ ಮತ್ತು ಉದುರುವಿಕೆಯಿಂದ ಉಂಟಾಗುವ ಮುರಿತವನ್ನು ಕಡಿಮೆ ಮಾಡಲು ನೆರವಾಗಬಹುದು. ಜೊತೆಗೆ ಕೂದಲನ್ನು ಬಾಚಲು ಅಗಲವಾದ ಹಲ್ಲುಗಳನ್ನು ಹೊಂದಿರುವ ಬಾಚಣಿಗೆಯನ್ನು ಬಳಸಿ. ಇದರಿಂದ ಕೂದಲು ಸಿಕ್ಕು ಬಿಡಿಸುವಾಗ ಉಂಟಾಗುವ ಎಳೆತ ಮತ್ತು ಮುರಿತವನ್ನು ಕಡಿಮೆ ಮಾಡಬಹುದು.
ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಸರಿಯಾದ ಶಾಂಪೂ, ಕಂಡಿಷನರ್ ಬಳಕೆ, ಅತಿಯಾದ ಶಾಖದಿಂದ ದೂರವಿರುವುದು ಮತ್ತು ಕೂದಲನ್ನು ಮೃದುವಾಗಿ ನಿರ್ವಹಿಸುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೂದಲು ಉದುರುವಿಕೆ ತೀವ್ರವಾಗಿದ್ದರೆ ಅಥವಾ ದೀರ್ಘಕಾಲ ಮುಂದುವರಿದರೆ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.










