ರೈತರಿಗಾಗಿ ಬಿಜೆಪಿ ಬೀದಿಗಿಳಿದು ಹೋರಾಟ
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ರೈತರಿಗೆ ಬರ ಪರಿಹಾರ ನೀಡದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಬಿಜೆಪಿ ಶಿರಹಟ್ಟಿ ಮತ್ತು ಮುಂಡರಗಿ ಮಂಡಲಗಳ ವತಿಯಿಂದ ಬುಧವಾರ ಬೃಹತ್ ಪಾದಯಾತ್ರೆ ನಡೆಸಲಾಯಿತು.
ತಾಲೂಕಿನ ಛಬ್ಬಿ ಗ್ರಾಮದ ಶ್ರೀ ಹೊರದುರಗಮ್ಮ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಶಿರಹಟ್ಟಿ ಪಟ್ಟಣದ ನೆಹರು ವೃತ್ತ ತಲುಪಿತು. ಬಳಿಕ ಗದಗ ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನೆಹರು ವೃತ್ತದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ರಾಜ್ಯ ಸರ್ಕಾರ ನಿರಂತರ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ. ಹಾಲಿನ ಬೆಲೆಯನ್ನು ನಾಲ್ಕು ಬಾರಿ ಏರಿಸಿ, ಬಸ್ ಪ್ರಯಾಣ ದರವನ್ನೂ ಹೆಚ್ಚಿಸಿದೆ. ರೈತರಿಗೆ ಘೋಷಿಸಿದ ₹5 ಸಾವಿರ ಪರಿಹಾರ ನೀಡಿಲ್ಲ. ಕೇಂದ್ರದ ಬೆಳೆ ವಿಮೆಯ ₹62 ಕೋಟಿ ಬಾಕಿ ಉಳಿಸಿಕೊಂಡಿದ್ದು, ಕಿಸಾನ್ ಸಮ್ಮಾನ್ ಯೋಜನೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದರು.
ತಾಲೂಕಿನ 20 ಕೆರೆ ತುಂಬಿಸುವ ಯೋಜನೆಗೆ ₹135 ಕೋಟಿ ವೆಚ್ಚ ನಿಗದಿಯಾಗಿದ್ದು, ₹115 ಕೋಟಿ ಬಿಲ್ ಮಾಡಲಾಗಿದೆ. ಆದರೆ ಕೆರೆಗಳಿಗೆ ನೀರು ತಲುಪಿಸುವ ಕಾರ್ಯ ಆರಂಭವಾಗಿಲ್ಲ. ಪೈಪ್ಗಳನ್ನು ಕೆರೆಗಳ ಮೇಲೆ ಇಟ್ಟುಕೊಂಡೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ ಎಂದು ಆರೋಪಿಸಿದ ಅವರು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೊಳೆ-ಇಟಗಿಯಿಂದ 20 ಹಳ್ಳಿಗಳ ರೈತರೊಂದಿಗೆ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡರಾದ ಸಣ್ಣವೀರಪ್ಪ ಹಳ್ಳೆಪ್ಪನವರ, ಸುನೀಲ ಮಹಾಂತಶೆಟ್ಟರ, ನಾಗರಾಜ ಲಕ್ಕುಂಡಿ, ಗಂಗಾಧರ ಮೆಣಸಿನಕಾಯಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
20 ಕೆರೆ ತುಂಬಿಸುವ ಯೋಜನೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು.— ಡಾ. ಚಂದ್ರು ಲಮಾಣಿ, ಶಾಸಕ










