ಬೆಳಗಾವಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅತ್ತೆ ಹಾಗೂ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ನಡೆದಿದೆ. ಬಸವ್ವ ನಾಯ್ಕರ್ (60) ಮತ್ತು ರಮೇಶ್ ನಾಯ್ಕರ್ (29) ಕೊಲೆಯಾದವರು. ಮೃತ ಬಸವ್ವ ಅವರ ಅಕ್ಕನ ಮಗ ಹಾಗೂ ತಂಗಿಯ ಮಗ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
10 ಎಕರೆ ಜಮೀನು ಹಂಚಿಕೆ ವಿಚಾರವಾಗಿ ಕಲಹ
ಕುಟುಂಬದ ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರ ನಡುವೆ 10 ಎಕರೆ ಜಮೀನು ಹಂಚಿಕೆ ವಿಚಾರವಾಗಿ ಬಹುಕಾಲದಿಂದ ವಿವಾದ ನಡೆಯುತ್ತಿತ್ತು ಎನ್ನಲಾಗಿದೆ. ಆಸ್ತಿ ಹಂಚಿಕೆಯ ವಿಚಾರವಾಗಿ ಕುಟುಂಬದ ಸದಸ್ಯರ ನಡುವೆ ಉಂಟಾಗಿದ್ದ ಕಲಹ ತೀವ್ರಗೊಂಡಿದ್ದು, ಇದೇ ವಿವಾದ ಕೊಲೆಯಲ್ಲಿ ಅಂತ್ಯವಾಗಿದೆ.
ಮೃತ ಬಸವ್ವ ಅವರ ಅಕ್ಕನ ಮಗ ಹಾಗೂ ತಂಗಿಯ ಮಗ ಸೇರಿಕೊಂಡು ಕೊಡಲಿಯಿಂದ ದಾಳಿ ನಡೆಸಿ ಬಸವ್ವ ಮತ್ತು ರಮೇಶ್ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಜೀವಾಪುರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ಸಾಕ್ಷ್ಯ ಸಂಗ್ರಹ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಮದುರ್ಗ ಡಿವೈಎಸ್ಪಿ ಸೇರಿದಂತೆ ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









