ಲಕ್ಷ್ಮೇಶ್ವರ: ಪಟ್ಟಣದ 15 ವರ್ಷದ ಯುವ ಕ್ರೀಡಾಪ್ರತಿಭೆ ಭುವನ್ ಗದ್ದಿ ಟೇಕ್ವಾಂಡೋ ಕ್ರೀಡೆಯಲ್ಲಿ ಸತತ 30 ನಿಮಿಷಗಳ ಕಾಲ ವಿವಿಧ ಸಾಹಸಮಯ ಕೌಶಲಗಳನ್ನು ಪ್ರದರ್ಶಿಸಿ ವಿಶ್ವ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ.
ಪಟ್ಟಣದ ಹಮಾಲರ ಕಾಲೋನಿ ನಿವಾಸಿಗಳಾದ ರಾಮಪ್ಪ ಮತ್ತು ನೇತ್ರಾವತಿ ಗದ್ದಿ ದಂಪತಿಯ ಪುತ್ರ ಭುವನ್, ಪ್ರಸ್ತುತ ಬೆಂಗಳೂರಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿ-ಸ್ಟಾರ್ ಟೇಕ್ವಾಂಡೋ ಅಕಾಡೆಮಿಯ ತರಬೇತುದಾರ ರವಿ ಮಾಸ್ಟರ್ ಅವರ ಮಾರ್ಗದರ್ಶನದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಠಿಣ ತರಬೇತಿ ಪಡೆಯುತ್ತಿದ್ದಾನೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿ-ಸ್ಟಾರ್ ಟೇಕ್ವಾಂಡೋ ಅಕಾಡೆಮಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಪೂಮ್ಸೆ, ಪಂಚಸ್, ಹ್ಯಾಂಡ್ ಲಾಕ್ ಹಾಗೂ ಕಿಕ್ಸ್ ಸೇರಿದಂತೆ ವಿವಿಧ ಕೌಶಲಗಳನ್ನು ಸತತ 30 ನಿಮಿಷಗಳ ಕಾಲ ಪ್ರದರ್ಶಿಸಿದ್ದಾನೆ. ಈ ಪ್ರದರ್ಶನದ ವಿಡಿಯೋವನ್ನು ಹೈದರಾಬಾದ್ನಲ್ಲಿ ಪ್ರದರ್ಶಿಸಲಾಗಿದೆ.
ಭುವನ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ, ರಾಷ್ಟ್ರಮಟ್ಟದಲ್ಲಿ ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿ ಪದಕ, ರಾಜ್ಯಮಟ್ಟದಲ್ಲಿ ಒಂದು ಚಿನ್ನದ ಪದಕ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾನೆ.
ಟೇಕ್ವಾಂಡೋ ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನೂ ಪಡೆದಿದ್ದಾನೆ. ಈಜು ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ಗಮನ ಸೆಳೆದಿದ್ದಾನೆ.
ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಮಹದಾಸೆ ಹೊಂದಿರುವ ಭುವನ್ನ ಸಾಧನೆಗೆ ಲಕ್ಷ್ಮೇಶ್ವರದ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.









