ಬೆಂಗಳೂರು: ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣ ಮಾಡುತ್ತಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ದೇವನಗೊಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಟರ್ಮಿನಲ್ನಲ್ಲಿ ಈ ಅಕ್ರಮ ಪತ್ತೆಯಾಗಿದ್ದು, ಟರ್ಮಿನಲ್ನ ಉಸ್ತುವಾರಿ ಅಧಿಕಾರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್, ಕೇಂದ್ರ ಸರ್ಕಾರ ನಿಗದಿಪಡಿಸಿರುವ E20 ಮಿತಿಯನ್ನು ಮೀರಿ ಎಥನಾಲ್ ಮಿಶ್ರಣ ಮಾಡಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 25ರಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ತೈಲ ಕಂಪನಿಗಳ ಟರ್ಮಿನಲ್ಗಳಲ್ಲಿರುವ ಮಾಸ್ ಫ್ಲೋ ಮೀಟರ್ಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ದೇವನಗೊಂದಿಯ IOCL ಟರ್ಮಿನಲ್ನ ಬೇ ನಂಬರ್ 9ರ ಮೀಟರ್ನಲ್ಲಿ ಪ್ರತಿ 3,000 ಲೀಟರ್ ಪೆಟ್ರೋಲ್ಗೆ 14 ಲೀಟರ್ ಹೆಚ್ಚುವರಿ ಎಥನಾಲ್ ಪೂರೈಕೆಯಾಗುತ್ತಿರುವುದು ಪತ್ತೆಯಾಗಿದೆ. ಜೊತೆಗೆ 4ರಿಂದ 6 ಲೀಟರ್ ಗ್ಯಾಸೋಲಿನ್ ಕೊರತೆಯೂ ಕಂಡುಬಂದಿದೆ.
ಇನ್ನು ಬೇ ನಂಬರ್ 4ರ ಮೀಟರ್ ಪರಿಶೀಲಿಸಿದಾಗ ಪ್ರತಿ 3,000 ಲೀಟರ್ಗೆ 3 ಲೀಟರ್ ಹೆಚ್ಚುವರಿ ಎಥನಾಲ್ ಮಿಶ್ರಣವಾಗುತ್ತಿರುವುದು ಬೆಳಕಿಗೆ ಬಂದಿದೆ.
ಏಳು ದಿನಗಳಲ್ಲಿ ವಿವರಣೆ ನೀಡಲು ಸೂಚನೆ:
ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣ ಹಾಗೂ ಪೆಟ್ರೋಲ್ ಪ್ರಮಾಣದಲ್ಲಿ ಕೊರತೆ ಕಂಡುಬಂದಿರುವುದು ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರ ಉಲ್ಲಂಘನೆಯ ಶಂಕೆ ಮೂಡಿಸಿದೆ. ಇದರಿಂದ ಗ್ರಾಹಕರು ಮತ್ತು ಪೆಟ್ರೋಲ್ ಬಂಕ್ ವಿತರಕರ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಏಳು ದಿನಗಳೊಳಗೆ ಲಿಖಿತ ಉತ್ತರ ಸಲ್ಲಿಸುವಂತೆ ಸೂಚಿಸಲಾಗಿದೆ. ಮೀಟರ್ಗಳ ನಿಖರತೆ ದೃಢಪಡಿಸುವವರೆಗೆ ಅವುಗಳ ವಾಣಿಜ್ಯ ಬಳಕೆಯನ್ನು ನಿರ್ಬಂಧಿಸಲಾಗಿದೆ.
ಸಮರ್ಪಕ ವಿವರಣೆ ನೀಡದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ.









