ಚೆನ್ನೈ: ಮಹಿಳಾ ಐಎಎಸ್ ಅಧಿಕಾರಿ ಹಾಗೂ ಕಲ್ಲಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಅನುಚಿತವಾಗಿ ವರ್ತಿಸಿದ ಆರೋಪದಡಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕ ಸಿ. ಅರುಳ್ ವಿಘ್ನೇಶ್ ಅವರನ್ನು ಬಂಧಿಸಲಾಗಿದೆ.
ಜಿಲ್ಲಾಧಿಕಾರಿ ಪದ್ಮಜಾ ಅವರಿಗೆ ಶಾಸಕ ಅರುಳ್ ವಿಘ್ನೇಶ್ ಅಸಭ್ಯ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ನವೆಂಬರ್ 23ರಂದು ಅವರು ಕಲ್ಲಕುರಿಚಿ ಪೊಲೀಸ್ ವರಿಷ್ಠಾಧಿಕಾರಿ ಶಹನಾಜ್ ಐ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಕಲ್ಲಕುರಿಚಿ ಮಹಿಳಾ ಪೊಲೀಸರು ಶಾಸಕರ ವಿರುದ್ಧ ಐದು ಕಾನೂನು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣವನ್ನು ಡಿಎಂಕೆ ಸಂಸದೆ ಕನಿಮೊಳಿ ಕರುಣಾನಿಧಿ ಸಾರ್ವಜನಿಕವಾಗಿ ಪ್ರಸ್ತಾಪಿಸಿದ ಬಳಿಕ ರಾಜಕೀಯ ವಲಯದಲ್ಲೂ ಚರ್ಚೆ ತೀವ್ರಗೊಂಡಿತ್ತು. ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು. ರಾಷ್ಟ್ರೀಯ ಮಹಿಳಾ ಆಯೋಗವೂ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನ್ಯಾಯಸಮ್ಮತ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ತಿರುಪ್ಪೂರು ಪೊಲೀಸ್ ವರಿಷ್ಠಾಧಿಕಾರಿ ಸೃಷ್ಟಿ ಸಿಂಗ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಐಜಿಪಿ ಎನ್. ಕಾಮಿನಿ ಅವರಿಗೆ ತನಿಖೆಯ ಮೇಲ್ವಿಚಾರಣೆ ವಹಿಸಲಾಗಿದೆ.
ಇದಲ್ಲದೆ, ಜಿಲ್ಲಾಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ತಮಿಳುನಾಡು ಸರ್ಕಾರ ನಾಲ್ವರು ಸದಸ್ಯರ ಆಂತರಿಕ ದೂರು ಸಮಿತಿಯನ್ನು (ICC) ರಚಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಾಕರ್ಲ ಉಷಾ ಸಮಿತಿಯ ಅಧ್ಯಕ್ಷರಾಗಿದ್ದು, ವಿಕಲಚೇತನರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎಸ್. ಮಧುಮತಿ, ಕಾನೂನು ಕಾರ್ಯದರ್ಶಿ ಪಿ. ಸುಮತಿ ಹಾಗೂ ಎನ್ಜಿಒ ಪ್ರತಿನಿಧಿ ಸುನೀತಾ ಜೋ ಸದಸ್ಯರಾಗಿದ್ದಾರೆ. POSH ಕಾಯ್ದೆಯಡಿ 60 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವಂತೆ ಸಮಿತಿಗೆ ಸೂಚಿಸಲಾಗಿದೆ.
ಏನಿದು ಪ್ರಕರಣ?
ಜಿಲ್ಲಾಧಿಕಾರಿಗೆ ಅಸಭ್ಯ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿರುವುದು, ಅವರ ಉಡುಗೆ ಹಾಗೂ ರೂಪದ ಬಗ್ಗೆ ಅನುಚಿತವಾಗಿ ಮಾತನಾಡಿರುವುದು ಶಾಸಕರ ವಿರುದ್ಧ ಕೇಳಿಬಂದಿರುವ ಪ್ರಮುಖ ಆರೋಪಗಳಾಗಿವೆ. ಅಲ್ಲದೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ಸ್ಪರ್ಶಿಸಲು ಯತ್ನಿಸಿದ್ದು, ರಾತ್ರಿ ವೇಳೆ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಲು ಪ್ರಯತ್ನಿಸಿದ್ದು ಸೇರಿದಂತೆ ಹಲವು ಆರೋಪಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಈ ಹಿಂದೆ ತಮ್ಮ ಮೇಲಿನ ಆರೋಪಗಳನ್ನು ಶಾಸಕ ಅರುಳ್ ವಿಘ್ನೇಶ್ ನಿರಾಕರಿಸಿದ್ದರು. ತಮ್ಮ ಹಾಗೂ ಆಡಳಿತ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದರು.
ಸದ್ಯ ಪ್ರಕರಣದಲ್ಲಿ ಶಾಸಕರ ಬಂಧನವಾಗಿದ್ದು, ಪೊಲೀಸ್ ತನಿಖೆ ಹಾಗೂ ಸರ್ಕಾರ ರಚಿಸಿರುವ ಆಂತರಿಕ ಸಮಿತಿಯ ವಿಚಾರಣೆ ಮುಂದುವರಿಯಬೇಕಿದೆ. ಆರೋಪಗಳ ಕುರಿತು ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.









