ಕೊಪ್ಪಳ: ಜಮೀನಿನಲ್ಲಿ ಹೈಟೆನ್ಶನ್ ವಿದ್ಯುತ್ ಕಂಬ ಅಳವಡಿಸಲು ಅವಕಾಶ ನೀಡದ ರೈತರ ವಿರುದ್ಧವೇ ಪೊಲೀಸ್ ದೂರು ದಾಖಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರ ಗ್ರಾಮದಲ್ಲಿ ನಡೆದಿದೆ.
ಖಾಸಗಿ ಸೋಲಾರ್ ಕಂಪನಿಯ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ಎಂಟು ಮಂದಿ ರೈತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರಿಂದ ಆಕ್ರೋಶಗೊಂಡ ರೈತ ಕುಟುಂಬಸ್ಥರು ಜಮೀನಿನಲ್ಲೇ ಕಣ್ಣೀರಿಟ್ಟಿದ್ದಾರೆ.
ಮಂಗಳೂರ ಗ್ರಾಮದ ಚೂರಿ ಹಾಗೂ ಸೊಟ್ನಾರ್ ಕುಟುಂಬಗಳಿಗೆ ಸೇರಿದ ಜಮೀನಿನಲ್ಲಿ ಖಾಸಗಿ ಸೋಲಾರ್ ಕಂಪನಿಯಾದ ಟೊರೆಂಟೋ, 220 ಕೆವಿ ಸ್ಟೇಷನ್ಗೆ ಸಂಬಂಧಿಸಿದ ಮೂರು ಹೈಟೆನ್ಶನ್ ವಿದ್ಯುತ್ ಕಂಬಗಳನ್ನು ಅಳವಡಿಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿ ಸಿಬ್ಬಂದಿ ಜೆಸಿಬಿ ಯಂತ್ರದೊಂದಿಗೆ ಜಮೀನಿಗೆ ಆಗಮಿಸಿ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಿದ್ದರು.
ಆದರೆ, ತಮ್ಮ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಂಬಗಳನ್ನು ಅಳವಡಿಸಲು ಅವಕಾಶ ನೀಡುವುದಿಲ್ಲ ಎಂದು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ರೈತರ ವಿರೋಧದ ಹಿನ್ನೆಲೆಯಲ್ಲಿ ಕಂಪನಿ ಸಿಬ್ಬಂದಿ ಜೆಸಿಬಿಯನ್ನು ಜಮೀನಿನಲ್ಲೇ ಬಿಟ್ಟು ತೆರಳಿದ್ದಾರೆ. ಕಾಮಗಾರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಬೇವೂರು ಪೊಲೀಸ್ ಠಾಣೆಯಲ್ಲಿ ಎಂಟು ಮಂದಿ ರೈತರ ವಿರುದ್ಧ ದೂರು ದಾಖಲಾಗಿದೆ.
ಮುದಕಪ್ಪ ಚೂರಿ, ವೀರೇಶ್ ಚೂರಿ, ಶಿವು ಚೂರಿ, ಶಿವಪುತ್ರಪ್ಪ ಚೂರಿ, ಮಂಗಲೇಶಪ್ಪ ಸೊಟ್ನಾರ್, ನೀಲಪ್ಪ, ಮಂಜು ಹಾಗೂ ಬಸವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ತಮ್ಮ ಜಮೀನು ಕಳೆದುಕೊಳ್ಳುವ ಆತಂಕದ ನಡುವೆಯೇ ಪೊಲೀಸ್ ಪ್ರಕರಣ ದಾಖಲಾಗಿರುವುದರಿಂದ ರೈತ ಕುಟುಂಬಗಳು ಕಂಗಾಲಾಗಿವೆ. ಜಮೀನಿನಲ್ಲೇ ಕಣ್ಣೀರಿಟ್ಟ ಕುಟುಂಬಸ್ಥರು, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಸಮಸ್ಯೆ ಕೇಳಲು ಯಾವ ರಾಜಕಾರಣಿಯೂ ಬಂದಿಲ್ಲ. ಯಾವುದೇ ಕಾರಣಕ್ಕೂ ನಾವು ಜಮೀನು ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಬಲವಂತವಾಗಿ ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಸಲು ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಸೋಲಾರ್ ಕಂಪನಿಯ ವಿದ್ಯುತ್ ಕಂಬ ಅಳವಡಿಕೆ ವಿಚಾರವಾಗಿ ರೈತರು ಮತ್ತು ಕಂಪನಿ ನಡುವೆ ಉಂಟಾಗಿರುವ ವಿವಾದ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಕುಕನೂರು ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.









