ಮಂಡ್ಯ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಇಂಡುವಾಳು ಗ್ರಾಮದ ಸಮೀಪ ಜಲ್ಲಿ ತುಂಬಿದ್ದ ಟಿಪ್ಪರ್ಗೆ ಹಿಂಬದಿಯಿಂದ ಮಹೀಂದ್ರಾ ಥಾರ್ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಯುವಕ ಮತ್ತು ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತರನ್ನು ಕೇರಳ ಮೂಲದ ಲಿಫೈಲ್ ಹಾಗೂ ಯುವತಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಸಿಲ್ಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂವರು ಮೈಸೂರಿನಿಂದ ಬೆಂಗಳೂರಿನ ಕಡೆಗೆ ಥಾರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಇಂಡುವಾಳು ಗ್ರಾಮದ ಬಳಿ ಜಲ್ಲಿ ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ಗೆ ಥಾರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆಯೂ ಉಂಟಾಗಿತ್ತು.
ಆರ್ಟಿಓ ಅಧಿಕಾರಿಗಳ ವಿರುದ್ಧ ಆಕ್ರೋಶ:
ಇನ್ನು ಅಪಘಾತದ ಬೆನ್ನಲ್ಲೇ ಆರ್ಟಿಓ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಇಂಡುವಾಳು ಸಮೀಪದ ಹೆದ್ದಾರಿ ಎಕ್ಸಿಟ್ನಲ್ಲಿ ಆರ್ಟಿಓ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಿತಿಮೀರಿ ಜಲ್ಲಿ ತುಂಬಿಕೊಂಡು ಬರುತ್ತಿದ್ದ ಮೂರು ಟಿಪ್ಪರ್ಗಳಲ್ಲಿ ಎರಡು ವಾಹನಗಳು ಅಧಿಕಾರಿಗಳ ಸೂಚನೆಯಂತೆ ನಿಂತಿದ್ದವು. ಮತ್ತೊಂದು ಟಿಪ್ಪರ್ ನಿಲ್ಲಿಸದೆ ಮುಂದೆ ಸಾಗಿತ್ತು ಎನ್ನಲಾಗಿದೆ.
ಇದರಿಂದ ಟಿಪ್ಪರ್ ಬೆನ್ನಟ್ಟಿದ ಆರ್ಟಿಓ ಅಧಿಕಾರಿಗಳು ತಮ್ಮ ವಾಹನವನ್ನು ಮುಂದೆ ತೆಗೆದುಕೊಂಡು ಹೋಗಿ ಟಿಪ್ಪರ್ಗೆ ಅಡ್ಡಲಾಗಿ ನಿಲ್ಲಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಗಾಬರಿಗೊಂಡ ಟಿಪ್ಪರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬರುತ್ತಿದ್ದ ಥಾರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ, ಅಪಘಾತಕ್ಕೆ ಆರ್ಟಿಓ ಅಧಿಕಾರಿಗಳ ಕ್ರಮವೇ ಕಾರಣವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತದ ನಿಖರ ಕಾರಣ ತಿಳಿದುಬರಬೇಕಿದೆ.









