ಚಾಮರಾಜನಗರ: ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳ ದುರ್ವರ್ತನೆ ಮಿತಿ ಮೀರಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಿಂದ ಕೆಳಗಿಳಿದ ಕಿಡಿಗೇಡಿಗಳ ಗುಂಪೊಂದು ಕಾಡಾನೆಯನ್ನು ಬೆನ್ನಟ್ಟಿ ತೊಂದರೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ 948 ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯದ ನಡುವೆ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಅರಣ್ಯ ಇಲಾಖೆ ವಿಧಿಸಿರುವ ನಿಯಮಗಳನ್ನು ಪ್ರವಾಸಿಗರು ಹಾಗೂ ವಾಹನ ಸವಾರರು ಗಾಳಿಗೆ ತೂರುತ್ತಿದ್ದಾರೆ. ನಿಷೇಧಿತ ಸಮಯದಲ್ಲೂ ರಾಜಾರೋಷವಾಗಿ ವಾಹನಗಳು ಸಂಚರಿಸುತ್ತಿವೆ.
ಇಷ್ಟೇ ಅಲ್ಲದೆ, ಕೆಲವರು ವಾಹನಗಳಿಂದ ಕೆಳಗಿಳಿದು ಕಾಡಿನೊಳಗೆ ತೆರಳುವ ದುಸ್ಸಾಹಸಕ್ಕೂ ಕೈಹಾಕುತ್ತಿದ್ದಾರೆ. ಇದೇ ರೀತಿ ಕಾರಿನಿಂದ ಇಳಿದ ಕಿಡಿಗೇಡಿಗಳ ಗುಂಪೊಂದು ಕಾಡಾನೆಯನ್ನು ಬೆನ್ನಟ್ಟಿ ಕಿರುಕುಳ ನೀಡಿದೆ. ಇದರಿಂದ ವನ್ಯಜೀವಿಗಳ ನೆಮ್ಮದಿಗೆ ಭಂಗ ಉಂಟಾಗುತ್ತಿದೆ.
ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸುರಕ್ಷತೆ ದೃಷ್ಟಿಯಿಂದ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೂ ಕೆಲವರು ನಿಯಮಗಳನ್ನು ಉಲ್ಲಂಘಿಸಿ ಕಾಡುಪ್ರಾಣಿಗಳಿಗೆ ತೊಂದರೆ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆಯೇ ಎಂಬ ಪ್ರಶ್ನೆಯೂ ಇದೀಗ ಮೂಡಿದೆ.









