ಒಂದೇ ವಾರದಲ್ಲಿ ನಾಲ್ಕು ಕಡೆ ದಾಳಿ; ಲಕ್ಷಾಂತರ ರೂ ಮೌಲ್ಯದ ಅನ್ನಭಾಗ್ಯ ಅಕ್ಕಿ ಜಪ್ತಿ

0
Spread the love

 

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಬಡವರಿಗೆ ಅನುಕೂಲವಾಗಲಿ ಅಂತ ಸರಕಾರ ಜಾರಿಗೆ ತಂದ ಅನ್ನಭಾಗ್ಯ ಅಕ್ಕಿ ಯೋಜನೆಯಿಂದ ಕಡುಬಡವರಿಗೂ ಹೆಚ್ಚು ಅನುಕೂಲವಾಗಲಿ ಎಂಬುದೇ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಾಗಿತ್ತು.
ಸರಕಾರಿ ಯೋಜನೆಗಳು ಅದರಲ್ಲೂ ಜನಪರ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಕೆಲ ದುರುಳರು ಸಜ್ಜಾಗಿರುತ್ತಾರೆಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಅಕ್ಕಿ ದಂಧೆಕೋರರು ಹಗಲು- ರಾತ್ರಿಯೆನ್ನದೆ ಯಾರದೂ ಭಯವಿಲ್ಲದೇ ಸಾಗಾಟ ನಡೆಸುತ್ತಿದ್ದಾರೆ.

ಒಂದೇ ವಾರದಲ್ಲಿ ಸೆರೆಸಿಕ್ಕ ಖದೀಮರು,
ಕಳೆದ ಹಲವು ದಿನಗಳಿಂದ ಈ ಅಕ್ಕಿ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಈ ದಂಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಸೀದಾ ದಂಧೆಕೋರರಿಗೆ ಮಾಹಿತಿ ನೀಡುತ್ತಿದ್ದರು. ದಂಧೆಗೆ ಅಡ್ಡಿ ಪಡಿಸುವವರಿಗೆ, ಅಧಿಕಾರಿಗಳ ಗಮನಕ್ಕೆ ತರುವವರಿಗೆ ದುಡ್ಡಿನ ಆಸೆ ತೋರಿಸಿ ಅವರನ್ನು ಬುಕ್ ಮಾಡಿಕೊಳ್ಳುತ್ತಿದ್ದ ದಂಧೆಕೋರರು, ಇಡೀ ಅವಳಿ ನಗರದಲ್ಲಿ ಅಕ್ಕಿ ಗಮಟಿನ ವಾತಾವರಣ ನಿರ್ಮಾಣ ಮಾಡಿದ್ದಾರೆ.

ಒಂದನೆಯ ಪ್ರಕರಣ ಜುಲೈ 27ರ ಮಧ್ಯಾಹ್ನ ಗದಗನ ಗುದಾಮವೊಂದರಲ್ಲಿ ಸ್ಟಾಕ್ ಆಗಿದ್ದ ಅಕ್ಕಿಯನ್ನು ಲೋಡ್ ಮಾಡಿಕೊಂಡು ಹೊರಟಾಗ ಹುಲಕೋಟಿ ಬಳಿ ಕೆಲ ಸಂಘಟನೆಯ ಕಾರ್ಯಕರ್ತರು ಲಾರಿ ನಿಲ್ಲಿಸಿ ವಿಚಾರಿಸಿದಾಗ ಅನ್ನಭಾಗ್ಯ ಅಕ್ಕಿ ಎಂದು ಗೊತ್ತಾಗಿದೆ. ಆಗ ಪೊಲೀಸರಿಗೆ ಮಾಹಿತಿ ನೀಡಲಾಗಿ ನಂತರ ದೊಡ್ಡ ಹೈಡ್ರಾಮಾ ನಡೆದಿದೆ. ಪೊಲೀಸರು, ಕೆಲ ಅಧಿಕಾರಿಗಳು ಕೇಸ್ ಮಾಡಿಕೊಳ್ಳಲು ತುಂಬಾ ಸತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಛೇಂಬರ್ ವರೆಗೂ ಈ ಪ್ರಕರಣ ಹೋದ ನಂತರ ಪೊಲೀಸರು ರಾಜಸ್ಥಾನದ ಲಾರಿ, ಚಾಲಕ ಧರ್ಮರಾಮ ಎಂಬಾತನನ್ನು ಬಂಧಿಸಿ, ಸುಮಾರು 4ಲಕ್ಷ 31 ಸಾವಿರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.

ಎರಡನೆಯದಾಗಿ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಜುಲೈ 30ರಂದು ಗೂಡ್ಸ್ ವಾಹನದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದಾಗ ಚಾಲಕ ಲಕ್ಕುಂಡಿಯ ಮಂಜುನಾಥ್ ಭೀಮಪ್ಪ ಈಟಿ ಎಂಬಾತನನ್ನು ಬಂಧಿಸಿ, 53 ಸಾವಿರ ರೂ. ಮೌಲ್ಯದ ಅಕ್ಕಿ ಜಪ್ತಿ ಮಾಡಲಾಗಿದ್ದು, ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 1 ರಂದು ಬೆಳಿಗ್ಗೆ ಹಳೆ ಡಿಸಿ ಆಫೀಸ್ ಹತ್ತಿರ ಮಿನಿಗೂಡ್ಸ್ ವಾಹನದಲ್ಲಿ 95ಸಾವಿರ ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಕೆಎ-26 ಬಿ3498 ವಾಹನದ ಚಾಲಕ ಪರಾರಿಯಾಗಿದ್ದಾನೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 4 ರಂದು ಮಧ್ಯಾಹ್ನ 12ಗಂಟೆಗೆ ಜಿಲ್ಲೆಯ ನರಗುಂದದ ರೋಣ ಕ್ರಾಸ್ ಬಳಿ ರಾಜಸ್ಥಾನ ಪಾಸಿಂಗ್ ಹೊಂದಿರುವ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಇಬ್ಬರು ಚಾಲಕರನ್ನು ಬಂಧಿಸಿ, ಅಂದಾಜು 50 ಕೆ.ಜಿ ತೂಕದ 400ಕ್ಕೂ ಹೆಚ್ಚು ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 5ಲಕ್ಷ 15 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಗೆ ಆಹಾರ ನಿರೀಕ್ಷಕ ಅನಿಲ ಪವಾರ ಎಂಬುವವರು ದೂರು ನೀಡಿದ್ದಾರೆ.

ಒಂದೇ ವಾರದಲ್ಲಿ ನಾಲ್ಕು ಪ್ರಕರಣಗಳು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಈ ಅನ್ನಭಾಗ್ಯ ಅಕ್ರಮದ ರೂವಾರಿಗಳು ಯಾರು ಎಂಬುದು ಪೊಲೀಸರಿಗೂ, ಆಹಾರ ಇಲಾಖೆಯ ಅಧಿಕಾರಿಗಳಿಗೂ ನಿಗೂಢವಾಗಿಲ್ಲ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಸದ್ಯಕ್ಕೆ ಚಾಲಕರಷ್ಟೇ ಬಂಧನವಾಗಿದೆ. ಈ ಅನ್ನಭಾಗ್ಯ ಅಕ್ರಮ ಅಕ್ಕಿ ಸಾಗಾಟದ ಮೂಲ ರೂವಾರಿಗಳನ್ನು ಪತ್ತೆ ಹಚ್ಚಬೇಕಾದ ಜವಬ್ದಾರಿ ಪೊಲೀಸ್ ಇಲಾಖೆಗೆ, ಜಿಲ್ಲಾಡಳಿತದ ಮೇಲಿದೆ.


Spread the love

LEAVE A REPLY

Please enter your comment!
Please enter your name here