ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾಬುದ್ದೀನ ಕವಡೇಲಿ ಅವರನ್ನು ವರ್ಗಾವಣೆ ಮಾಡಿ, ಅವರ ಅಧಿಕಾರಾವಧಿಯಲ್ಲಿ ಸರ್ಕಾರದ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲು ಮಾಡಿ ಅವ್ಯವಹಾರ ನಡೆಸಿದ್ದರ ಕುರಿತು ಸಮಗ್ರ ತನಿಖೆ ಕೈಗೊಳ್ಳುವಂತೆ ಗದಗ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶಿಸಿದ್ದಾರೆ.
ಸದರಿ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ರೈತ ಸೇನಾ(ರಿ)ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ, ಡಂಬಳ ಗ್ರಾಮದ ಮಂಜಯ್ಯಸ್ವಾಮಿ ಅರವಟಗಿಮಠ ಜಿಲ್ಲಾ ಪಂಚಾಯತಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಲಿ ಕಾರ್ಯನಿರ್ವಹಿಸುತ್ತಿದ್ದ ಶಾಬುದ್ದೀನ ಕವಡೇಲಿ ಅವರನ್ನು ಶಿಂಗಟಾಲೂರಿನ ಗ್ರಾ.ಪಂ. ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವಂತೆ ಹಾಗೂ ಸದರಿ ಡಂಬಳ ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬಾಗೇವಾಡಿ ಗ್ರಾ.ಪಂ ಪಿಡಿಓ ಅನಿಲಗೌಡ್ರ ಮಲ್ಲನಗೌಡ್ರ ಇವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ವಿಷಯದ ಬಗ್ಗೆ ಪರಿಶೀಲಿಸಿ, ತಾಲೂಕು ಪಂಚಾಯತ ಹಂತದಲ್ಲಿ ಒಬ್ಬ ಅಧಿಕಾರಿಯನ್ನು ನೇಮಿಸಿ ಅವರಿಂದ ತನಿಖಾ ವರದಿ ಪಡೆದು, ಸ್ಪಷ್ಟ ಅಭಿಪ್ರಾಯದೊಂದಿಗೆ ಕಛೇರಿಗೆ ವರದಿ ನೀಡುವಂತೆ ಮುಂಡರಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಜಯ್ಯಸ್ವಾಮಿ ಅರವಟಗಿಮಠ, ನಮ್ಮ ಹೋರಾಟಕ್ಕೆ ಸ್ಪಂದಿಸಿ ಕಳೆದ ಒಂಬತ್ತು ವರ್ಷಗಳಿಂದ ಡಂಬಳ ಗ್ರಾ.ಪಂ.ನಲ್ಲಿ ಬೀಡು ಬಿಟ್ಟು ಸರಕಾರದ ಅನುದಾನ ಲೂಟಿ ಮಾಡಿ, ಸರ್ಕಾರದ ಜಾಗೆಯನ್ನ ಖಾಸಗಿ ವ್ಯಕ್ತಿಗಳಿಗೆ ದಾಖಲು ಮಾಡಿದಂತಹ ಭ್ರಷ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಿ, ತನಿಖೆ ನಡೆಸಲು ಆದೇಶಿಸಿದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರೈತ ಸೇನಾ ಕರ್ನಾಟಕ ಹಾಗೂ ಡಂಬಳ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.