HomeGadag Newsಮುಸ್ಲಿಂ ಬಾಂಧವರ ಮನೆಯಲ್ಲಿ ಶ್ರೀಗಳಿಗೆ ಪಾದಪೂಜೆ; ಮತ್ತೊಮ್ಮೆ ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ಮುದ್ರಣ ಕಾಶಿ

ಮುಸ್ಲಿಂ ಬಾಂಧವರ ಮನೆಯಲ್ಲಿ ಶ್ರೀಗಳಿಗೆ ಪಾದಪೂಜೆ; ಮತ್ತೊಮ್ಮೆ ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ಮುದ್ರಣ ಕಾಶಿ

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಗದುಗಿನ ಆ ಮನೆಯ ಒಳಾಂಗಣದಲ್ಲಿ ಸ್ವಾಮೀಜಿಗಳು ಆಸೀನರಾಗಿದ್ದರು. ಶಿವ ಭಜನೆಯ ಆಲಾಪ ಕೇಳಿಬರುತ್ತಿತ್ತು. ಸ್ವಾಮೀಜಿಗಳೆದುರು ಪೂಜಾ ಸಾಮಗ್ರಿಗಳು ಒಪ್ಪವಾಗಿ ಜೋಡಿಸಲ್ಪಟ್ಟಿದ್ದವು. ವಿವಿಧ ಹಣ್ಣು-ಹಂಪಲುಗಳು, ನಾನಾ ವಿಧದ ಹೂಪತ್ರೆಗಳನ್ನು ಜೋಡಿಸಿಕೊಂಡು ದಂಪತಿಗಳು ಪಾದಪೂಜೆ ನೆರವೇರಿಸುತ್ತಿದ್ದರು. ಇದರಲ್ಲೇನು ವಿಶೇಷತೆಯೆನ್ನಬೇಡಿ. ವಿಶೇಷವಿದೆ. ಇಲ್ಲಿ ಮಠಾಧೀಶರ ಪಾದಪೂಜೆ ನೆರವೇರಿಸಿ ಪುನೀತರಾಗಿದ್ದು ಮುಸ್ಲಿಂ ಕುಟುಂಬವೊಂದರ ಸದಸ್ಯರು!

ನಾಡಿನಾದ್ಯಂತ ಧರ್ಮ ದಂಗಲ್ ಎದ್ದಿದ್ದು, ಕೋಮು ಸೌಹಾರ್ದತೆ ಕದಡುತ್ತಿದೆ. ಇತ್ತಿಚೆಗೆ ಹಿಜಾಬ್, ಹಲಾಲ್ ಕಟ್, ಅಜಾನ್ ಸಮರ ಎಲ್ಲವೂ ಮುಗಿದು ಗಣೇಶನ ದಂಗಲ್ ಆರಂಭವಾಗಿದೆ. ತಿಳಿನೀರ ಕೊಳದಲ್ಲಿ ಕಲ್ಲೆಸೆದಂತೆ ಕೋಮು ಸಾಮರಸ್ಯ ಹಾಳಾಗುತ್ತಿದೆ. ಇವೆಲ್ಲವುಗಳ ಮಧ್ಯೆ ಮುಸ್ಲಿಂ ಮನೆಯೊಂದರಲ್ಲಿ ಓಂ ನಮಃ ಶಿವಾಯ ಮಂತ್ರಘೋಷ ಮೊಳಗಿದೆ. ಮುಸ್ಲಿಂ ಕುಟುಂಬವೊಂದು ಸ್ವಾಮೀಜಿಗಳನ್ನು ಮನೆಗೆ ಕರೆಯಿಸಿ, ಪಾದಪೂಜೆ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆದಿದ್ದಾರೆ. ಇಂಥದೊಂದು ಅಪರೂಪದ ಘಟನೆ ನಡೆದಿದ್ದು, ಮುದ್ರಣ ಕಾಶಿ ಗದಗ ನಗರದಲ್ಲಿ.

ಕೋಮು ಸೌಹಾರ್ದತೆಗೆ ಹೆಸರಾಗಿದ್ದು ನಮ್ಮ ಗದಗ. ಇಲ್ಲಿ ಈಶ್ವರ-ಅಲ್ಲಾ ಬೇರೆಯಲ್ಲ. ಮುಸ್ಲಿಮರು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಹಿಂದೂ ಬಾಂಧವರು ರಂಜಾನ್ ಹಬ್ಬಕ್ಕೆ ಮಸೀದಿಗೆ ಸ್ವತಃ ಬಣ್ಣವನ್ನೂ ಬಳಿಯುತ್ತಾರೆ. ಒಂದೇ ಮನೆಯಲ್ಲಿ ಹಿಂದು ಹಾಗೂ ಮುಸ್ಲಿಂ ಸಂಪ್ರದಾಯದ ಆರಾಧನೆಯೂ ನಡೆಯುತ್ತದೆ. ಈಗೀಗ ನಾಡಿನಲ್ಲಿ ಕೋಮು ಸೌಹಾರ್ದ ಕದಡುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇದರ ಮಧ್ಯೆ ಮುದ್ರಣ ಕಾಶಿ ಗದಗನಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವ ಕೆಲಸವಾಗಿದೆ.

ಗದಗ ನಗರದ ಹುಡ್ಕೋ ಕಾಲೋನಿಯ ನಿವಾಸಿ ಸಿಕಂದರ್ ಬಡೇಖಾನರ ಮನೆಗೆ ಧಾರವಾಡದ ಸ್ವರೂಪಾನಂದ ಭಾರತಿ ಸ್ವಾಮೀಜಿಗಳು ಆಗಮಿಸಿ ಪಾದಪೂಜೆಯನ್ನು ಮಾಡಿಸಿಕೊಂಡಿದ್ದಾರೆ. ಬಡೆಖಾನ್ ದಂಪತಿಗಳು ಸ್ವಾಮೀಜಿಗಳಿಗೆ ಪಾದಪೂಜೆ ನೆರವೇರಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಹತ್ತು ವರ್ಷಗಳಿಂದಲೂ ಈ ಮುಸ್ಲಿಂ ಮನೆಯಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿಸುತ್ತ ಬಂದಿದ್ದಾರೆ. ಮುಸ್ಲಿಂ ಮನೆಯಲ್ಲಿ ಓಂಕಾರ ಮಂತ್ರವನ್ನು ಹೇಳುತ್ತಾ, ಹಿಂದು-ಮುಸ್ಲಿಂ ಒಂದೇ ಎನ್ನುವ ಸಂದೇಶವನ್ನು ಸಾರಿದ್ದಾರೆ.

ಸಿಕಂದರ್ ಬಡೆಖಾನ್ ಮೂಲತಃ ಉಪನ್ಯಾಸಕರಾಗಿದ್ದು, ಸಧ್ಯ ನಿವೃತ್ತಿ ಹೊಂದಿದ್ದಾರೆ. ಇವರು ಹಲವಾರು ವರ್ಷಗಳಿಂದ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಓಂಕಾರ ಆಶ್ರಮದ ಸ್ವಾಮಿಗಳ ಭಕ್ತರಾಗಿದ್ದಾರೆ. ಜಾತಿಗಳ ನಡುವಿನ ಸಂಕೋಲೆಯನ್ನು ಕಳಚಿದ್ದಾರೆ. ಎಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರಿದ್ದಾರೆ. ಅವರ ಆದರ್ಶಗಳಿಗೆ ಮಾರುಹೋಗಿ ಸಿಕಂದರ್ ಬಡೆಖಾನ್ ಅವರು ಸ್ವಾಮೀಜಿಗಳ ಭಕ್ತರಾಗಿದ್ದಾರೆ. ಸಿಕಂದರ್ ಬಡೆಖಾನ್ರ ಮನೆಯಲ್ಲಿ ಶಿವ, ಸಿದ್ದಾರೂಢ ಸೇರಿದಂತೆ ಹಲವು ಹಿಂದೂ ದೇವರ ಪೋಟೋಗಳು, ಮುಸ್ಲಿಂ ಧರ್ಮದ ಕುರಾನ್ ಪೋಟೋಗಳೂ ಇವೆ. ಮುಸ್ಲಿಂ ಪದ್ಧತಿಯಂತೆ ನಮಾಜ್ ಮಾಡುತ್ತಾರೆ, ಹಿಂದು ಸಂಪ್ರದಾಯ ಪ್ರಕಾರ ಪೂಜೆಯನ್ನೂ ಕೈಗೊಳ್ಳುತ್ತಾರೆ. ಇವರ ಮನೆಯಲ್ಲಿ ನಡೆಯುವ ಶ್ರೀಗಳ ಪಾದಪೂಜೆ ಕಾರ್ಯಕ್ರಮಕ್ಕೆ ಅಕ್ಕಪಕ್ಕದ ಹಿಂದು-ಮುಸ್ಲಿಂ ಸಮಾಜದವರು ಆಗಮಿಸುತ್ತಾರೆ.

ಸಿಕಂದರ್ ಬಡೇಖಾನ್ ಸ್ವರೂಪಾನಂದ ಸ್ವಾಮಿಗಳ ಪಾದಪೂಜೆ ನೆರವೇರಿಸಿ ಪುನೀತರಾದರು.

ಒಟ್ಟಿನಲ್ಲಿ, ಗದಗದಲ್ಲಿನ ಈ ಕೋಮು ಸೌಹಾರ್ದ ಇಡೀ ಸಮಾಜಕ್ಕೇ ಉತ್ತಮ ಸಂದೇಶ ನೀಡುವಂತಿದೆ. ಆ ಜಾತಿ- ಈ ಮತವೆಂದು ಇಲ್ಲಸಲ್ಲದ ಸಮಸ್ಯೆ ಸೃಷ್ಟಿಸುವದಕ್ಕಿಂತ, ಎಲ್ಲರೂ ಒಂದೇ ಎಂಬ ಭಾವದಿಂದ ಜೀವನ ನಡೆಸಿದರೆ, ಎಲ್ಲರೂ ಸಾಮರಸ್ಯದಿಂದ ಬಾಳಬಹುದೆಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ, ಅಲ್ಲವೇ.

ಅನಾದಿಕಾಲದಿಂದಲೂ ಈ ವಿಷಯಕ್ಕೆ ಸಂಬಂಧಿಸಿ ಸಮಾಜದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈಗಲೂ ಇದೆ. ಗುರುವಿನ ಮಾರ್ಗದರ್ಶನವಿಲ್ಲದಿದ್ದರೆ, ಗುರಿ ಸೇರುವ ದಾರಿ ದುಸ್ತರವಾಗುತ್ತದೆ. ನಾವು ಯಾರು, ನಮ್ಮ ಕರ್ತವ್ಯವೇನು ಎಂಬುದನ್ನು ಅರಿತರೆ, ಜೀವನದಲ್ಲಿ ಗೊಂದಲಗಳಿರುವದಿಲ್ಲ. ಈ ಹೊಡೆದಾಟ-ಬಡಿದಾಟ, ಸಂಘರ್ಷಗಳು ಇರುವದಿಲ್ಲ. ಎಲ್ಲರ ಜೀವನವೂ ಪ್ರೀತಿಯಿಂದಿರುತ್ತದೆ. ಪ್ರೀತಿಯನ್ನು ಹಂಚಿ, ಸಂತೋಷದಿಂದ ಬಾಳಿ. ಮುಖ್ಯವಾಗಿ ಮನುಷ್ಯನಲ್ಲಿ ಸಂಸ್ಕಾರಗಳು ಬೇಕು. ಸಿಕಂದರ್ ಜನ್ಮತಃ ಮುಸ್ಲಿಮರಾಗಿದ್ದರೂ, ಎಲ್ಲರಲ್ಲಿರುವ ಆತ್ಮಚೈತನ್ಯ ಒಂದೇ. ಮಾನವ ಕುಲ ಒಂದೇ ಎಂಬ ಸಂದೇಶ ನೀಡಿದರು.

-ಸ್ವರೂಪಾನಂದ ಭಾರತಿ ಸ್ವಾಮಿಗಳು

 

ನಮ್ಮ ಬಂಧು-ಬಳಗದವರೆಲ್ಲರೂ ಶ್ರಾವಣ ಮಾಸದ ಶುಭ ಸಮಯದಲ್ಲಿ ಪಾದಪೂಜೆ ನೆರವೇರಿಸಿದ್ದೇವೆ. ನಮ್ಮ ರಕ್ತ ಶುದ್ಧಿಯಾಗಿ ಕಣಕಣದಲ್ಲೂ ಹುಮ್ಮಸ್ಸು ಹರಿಯಬೇಕೆಂದರೆ, ಅದು ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯ. ಈ ಜಗತ್ತು ನಮ್ಮದು. ಎಲ್ಲರೂ ನಮ್ಮವರೇ ಇದ್ದಾರೆ, ಅವುಗಳ ನಡುವೆ ಬೇಧಭಾವ ಸಲ್ಲದು ಎಂಬ ಗುರುಗಳ ಮಾತು ಎಂದಿಗೂ ನಮ್ಮ ಮನಸ್ಸಿನಲ್ಲಿರುತ್ತದೆ. ನಮಗೆ ಆಧ್ಯಾತ್ಮ-ಪುರಾಣಗಳ ಬಗ್ಗೆ ಯಾವುದೇ ಕಲ್ಪನೆಗಳಿರಲಿಲ್ಲ. ಸ್ವಾಮೀಜಿಗಳು ನಮಗೆ ಸನ್ಮಾರ್ಗ ತೋರಿಸಿದ್ದಾರೆ. ಪ್ರತೀ ವರ್ಷ ಗದುಗಿಗೆ ಶಿಷ್ಯರ ಮನೆಗೆ ಬಂದಾಗ ನಮ್ಮ ಮನೆಗೂ ಬಂದು ಪಾದಪೂಜೆ ಸ್ವೀಕರಿಸುತ್ತಾರೆ. ಇದಕ್ಕಿಂತ ಪುಣ್ಯ ನಮಗೇನಿದೆ ಎಂದರು.

-ಸಿಕಂದರ್ ಬಡೆಖಾನ್, ನಿವೃತ್ತ ಉಪನ್ಯಾಸಕರು.

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!