ವಿಜಯಸಾಕ್ಷಿ ಸುದ್ದಿ, ಬೀದರ್
10 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವೊಂದು ಅನಾಮತ್ತಾಗಿ ಕುರಿಯೊಂದನ್ನು ನುಂಗಿರುವ ಘಟನೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.
ಘಾಟಹಿಪ್ಪರ್ಗಾ ಗ್ರಾಮದ ಗುಡ್ಡದಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವು ಕುರಿಗಾಹಿ ರಾಜಕುಮಾರ ರೊಡ್ಡೆ ಎಂಬುವರಿಗೆ ಸೇರಿದ ಕುರಿಯನ್ನು ನುಂಗಿ ಜೀರ್ಣಸಿಕೊಳ್ಳಲು ಹೆಣಗಾಡುತ್ತಿತ್ತು. ಈ ದೃಶ್ಯ ಕಣ್ಣಿಗೆ ಬೀಳುತ್ತಿದ್ದಂತೆಯೇ ಸ್ಥಳದಲ್ಲಿದ್ದವರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಉರಗ ತಜ್ಞ ಅಶೋಕ ಶೆಟ್ಟಿಯವರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಹೆಬ್ಬಾವು ಅದೇ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಮಣಭಾರದ ಹೆಬ್ಬಾವನ್ನು ಹಿಡಿದು, ಹರಸಾಹಸದಿಂದ ಹಾವಿನ ಹೊಟ್ಟೆಯಲ್ಲಿದ್ದ ಕುರಿಯನ್ನು ಹೊರಕ್ಕೆ ತೆಗೆದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹೆಬ್ಬಾವನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮುರ್ತುಜಾ ಖಾದ್ರಿ, ಸಂತೋಷ, ನಿಸಾರ ಅಹಮದ್ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.