ಜೀವ ಬೆದರಿಕೆ, ಅಪಹರಣದ ಆರೋಪ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ನರೇಗಾ ಕೆಲಸದಲ್ಲಿ ಅವ್ಯವಹಾರವಾಗಿದೆಯೆಂದು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದನೆಂದು ಆರೋಪಿಸಿ, ಆರೋಪಿತರೆಲ್ಲರೂ ಸೇರಿ ಜೀವ ಬೆದರಿಕೆ ಹಾಕಿದ್ದು, ಇದೇ ಕಾರಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿರುವ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ
ಡಿ.27ರಂದು ಮದ್ಯಾಹ್ನ 12 ಗಂಟೆಯ ಹೊತ್ತಿಗೆ ಸೂರಣಗಿ ಗ್ರಾ.ಪಂ.ನಲ್ಲಿ ನರೇಗಾ ಕೆಲಸದಲ್ಲಿ ಅವ್ಯವಹಾರ ಆಗಿದೆಯೆಂದು ಅದರ ಪರಿಶೀಲನೆಯ ಕುರಿತು ಸಂಬಂಧಿಸಿದ ಮೇಲಧಿಕಾರಿಗಳು ಗ್ರಾ.ಪಂ.ಗೆ ಬಂದು ಗ್ರಾಮದ ಮಾಸಿನಸರ ಕೆರೆಯ ಹತ್ತಿರ ಪರಿಶೀಲನೆಗಾಗಿ ಹೋದಾಗ, ಆರೋಪಿತರಾದ ಸೂರಣಗಿಯ ಚಂದ್ರಶೇಖರ ಪವಾಡೆಪ್ಪ ಮೂಲಿಮನಿ, ಶಂಕ್ರಪ್ಪ ಚಿನ್ನಪ್ಪ ಶೀರನಹಳ್ಳಿ, ನೀಲಪ್ಪ ಹಾಲಪ್ಪ ದೊಡ್ಡಣ್ಣವರ, ಶರಣಪ್ಪ ನೀಲಪ್ಪ ಇಚ್ಚಂಗಿ, ಹೆಗ್ಗಪ್ಪ ನೀಲಪ್ಪ ಪೂಜಾರ ಇವರೆಲ್ಲರೂ ಸೇರಿ, ದೂರುದಾರ ಅಶೋಕ ಸೂರಣಗಿಯ ಸಹೋದರ ಪ್ರವೀಣ ಸೂರಣಗಿ ಇವನಿಗೆ ನರೇಗಾ ಕೆಲಸದಲ್ಲಿ ಅವ್ಯವಹಾರವಾಗಿದೆಯೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನೀನೇ ಕರೆಸಿದ್ದೀಯಾ ಎಂದು ಅವಾಚ್ಯವಾಗಿ ಬೈದಾಡಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ನಂತರ ಡಿ.29ರಂದು ಬೆಳಿಗ್ಗೆಯಿಂದ ಹಲ್ಲೆಗೊಳಗಾದ ವ್ಯಕ್ತಿ ಪ್ರವೀಣ ಸೂರಣಗಿ ಮನೆಯಲ್ಲಿ ಕಾಣದಿದ್ದಾಗ, ಕುಟುಂಬಸ್ಥರು ಅಲ್ಲೆಲ್ಲ ಹುಡುಕಾಡಿಯೂ ಸಿಗದಿದ್ದಾಗ, ಎರಡು ದಿನಗಳ ಹಿಂದೆ ಆತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳೇ ಪ್ರವೀಣನನ್ನು ಅಪಹರಣ ಮಾಡಿದ್ದಾರೆಂದು ಸಂದೇಹಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.