ವಿಧಾನಸೌಧದ ಗೇಟ್ ಬಳಿ 10 ಲಕ್ಷ ರೂ.ಹಣ ಸೀಜ್ ಪ್ರಕರಣಕ್ಕೆ ಶಾಸಕ ಎಚ್ ಕೆ ಪಾಟೀಲ ಪ್ರತಿಕ್ರಿಯೆ
ವಿಜಯಸಾಕ್ಷಿ ಸುದ್ದಿ, ಗದಗ
ವಿಧಾನಸೌಧದ ಗೇಟ್ ಬಳಿ 10 ಲಕ್ಷ ರೂ. ಹಣ ಸೀಜ್ ಮಾಡಿರುವ ಪ್ರಕರಣ ನಡೆದಿದೆ. ಯಾವ ಸಚಿವರಿಗೆ ಕೊಡಬೇಕೆಂದು ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರೋ, ಅವರನ್ನು ೨೪ ಗಂಟೆಯೊಳಗಾಗಿ ಅಧಿಕಾರದಿಂದ ಕೆಳಗಿಳಿಸಿ. ಆ ಅಧಿಕಾರಿಯನ್ನು ಅಮಾನತು ಮಾಡಿ, ಅವನ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಿ. ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳದಿದ್ದರೆ, ಸರ್ಕಾರ ದಂಧೆ ಮಾಡಲು ಎಲ್ಲರನ್ನೂ ಮುಕ್ತವಾಗಿ ಬಿಟ್ಟಿದೆ ಎಂದು ತಿಳಿದುಕೊಳ್ಳುತ್ತೇವೆ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೦ ಲಕ್ಷ ರೂಪಾಯಿ ಹಣ ಸೀಜ್ ಆಗಿರೋದು ನನಗೆ ಭಾರೀ ಐಶ್ವರ್ಯ ತಂದಿಲ್ಲ. ವಿಧಾನಸೌಧಕ್ಕೆ ಅಧಿಕಾರಿಗಳು ದೊಡ್ಡ ಮೊತ್ತದ ಹಣವನ್ನು ಹೊತ್ತುಕೊಂಡು ಹೋಗುತ್ತಾರೆ. ಇದನ್ನು ನೋಡಿದರೆ, ಸರ್ಕಾರ ಜೀವಂತವಾಗಿದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ.
ಕಾನೂನು ಬಾಹಿರವಾಗಿ ಕೆಲಸ ಮಾಡಲು ಹೆದರಿಕೆಯೇ ಇಲ್ಲದಂತಾಗಿದೆ. ಖಾಸಗಿ ವ್ಯಕ್ತಿಗಳು ೫೦ ಸಾವಿರ ರೂ. ಹಣ ಇಟ್ಟುಕೊಳ್ಳಲೂ ಭಯ ಪಡುವಂತಾಗಿದೆ. ಹೀಗಿರುವಾಗ ೧೦ ಲಕ್ಷ ರೂ. ಇಟ್ಟುಕೊಂಡು ವಿಧಾನಸೌಧಕ್ಕೆ ಹೋಗುವ ಅಧಿಕಾರಿಗಳೂ ಇದ್ದಾರೆಂದರೆ, ಇದಕ್ಕಿಂತ ನಾಚಿಕೆಗೇಡಿತನ ಇನ್ನೇನಿದೆ? ಎಂದು ಪ್ರಶ್ನಿಸಿದ ಪಾಟೀಲರು, ಕೂಡಲೇ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸುರೇಶ್ ಕಟ್ಟಿಮನಿ, ಮುಖಂಡರಾದ ರಮೇಶ್ ಹೊನ್ಬಿನಾಯ್ಕರ್, ಅಶೋಕ ಮಂದಾಲಿ, ಬಸವರಾಜ್ ಕಡೆಮನಿ, ಜಾಯಿನಗೌಡ್ರ ಸೇರಿದಂತೆ ಅನೇಕರಿದ್ದರು.