ಅನಧಿಕೃತ ನಿವೇಶನಗಳಿಗೆ ಇ-ಸ್ವತ್ತು ನೀಡಿರುವ ಆರೋಪ
ವಿಜಯಸಾಕ್ಷಿ ಸುದ್ದಿ, ದೊಡ್ಡಬಳ್ಳಾಪುರ/ಗದಗ
ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಇಲ್ಲದೆ ನಿವೇಶನಗಳಿಗೆ ಇ-ಸ್ವತ್ತು ಮಾಡಿಕೊಟ್ಟಿರುವ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ. ಜಾಯಗೊಂಡೆ ಅಮಾನತ್ತಗೊಳಿಸಿ ಪೌರಾಡಳಿತ ಇಲಾಖೆ ಆದೇಶ ಹೊರಡಿಸಿದೆ.
ದೊಡ್ಡಬಳ್ಳಾಪುರ ನಗರಸಭೆ ವಾರ್ಡ್ ನಂ.11ರ ಕರೇನಹಳ್ಳಿ ವ್ಯಾಪ್ತಿಯ ಅನಧಿಕೃತ ನಿವೇಶನಗಳಿಗೆ ಅಕ್ರಮವಾಗಿ ಖಾತೆ ಮಾಡಿದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ 39 ಅನಧಿಕೃತ ನಿವೇಶನಗಳಿಗೆ ಇ-ಸ್ವತ್ತು ನೀಡಿದ್ದು, ಇದನ್ನು ಕೆ.ಎಮ್. ಎಫ್.-24 ವಹಿಯಲ್ಲಿ ನಮೂದಿಸಿದೆ ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಹಾಗೂ ಸರಕಾರದ ಸುತ್ತೋಲೆಗಳ ಅನುಸಾರ ಖಾತೆಗಳನ್ನು ರದ್ದುಪಡಿಸಲು ಕ್ರಮ ವಹಿಸದೆ 39 ನಿವೇಶನಗಳ ಆಸ್ತಿಯ ಹಕ್ಕನ್ನು ಪೌವತಿ ವಾರಸ್ಸ ಶ್ರೀಮತಿ ಸುಜಾತರೆಡ್ಡಿ ಕೋಂ ಲೆ|| ಎನ್. ರಾಮರಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಬಿನ್ ಲೇ|| ರಾಮರಡ್ಡಿ ಹೆಸರಿಗೆ
ಜಂಟಿಯಾಗಿ ಆಸ್ತಿ ಹಕ್ಕನ್ನು ವರ್ಗಾಯಿಸಿ ಇ-ಸ್ವತ್ತು ಮಾಡಿಕೊಡಲು ಕಾರಣರಾಗಿ ಕರ್ತವ್ಯಲೋಪ ಎಸಗಿರುವ ಅಂದಿನ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ. ಜಾಯಗೊಂಡೆ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಪೌರಾಡಳಿತ ಇಲಾಖೆಗೆ ಪತ್ರ ಬರೆದಿದ್ದರು.

ಈ ಪತ್ರ ಗಮನಿಸಿದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಮಂಜುಶ್ರೀ ಎನ್. ಅವರು ಕರ್ತವ್ಯ ಲೋಪ ಎಸಗಿರುವ ಅಂದಿನ ದೊಡ್ಡಬಳ್ಳಾಪೂರ ನಗರಸಭೆ ಪೌರಾಯುಕ್ತರಾಗಿದ್ದ ಹಾಗೂ ಗದಗ -ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ.ಜಾಯಗೊಂಡೆ ಮೇಲಿನ ಇಲಾಖಾ ವಿಚಾರಣೆ ಕಾಯ್ದಿರಿಸಿ ಕೆ. ಸಿ. ಎಸ್. (ಸಿಸಿಎ) ನಿಯಮಗಳು, 1957 ರ ನಿಯಮ 10(1)(ಡಿ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ದಿ-05-01-2023 ರಂದು ಆದೇಶ ಹೊರಡಿಸಿದ್ದಾರೆ.