HomeASSEMBLE ELECTIONಪ್ರಧಾನಿ ಮೋದಿ ಪ್ರಚಾರ ಸಂದರ್ಭದಲ್ಲಿಯೇ ಆತಂಕಕಾರಿ ಅಡಿಯೋ ಬಹಿರಂಗ: ತನಿಖೆಗೆ ಸಿಎಂ ಆದೇಶ!

ಪ್ರಧಾನಿ ಮೋದಿ ಪ್ರಚಾರ ಸಂದರ್ಭದಲ್ಲಿಯೇ ಆತಂಕಕಾರಿ ಅಡಿಯೋ ಬಹಿರಂಗ: ತನಿಖೆಗೆ ಸಿಎಂ ಆದೇಶ!

For Dai;y Updates Join Our whatsapp Group

Spread the love

ಅನಿಲ್ ಬಾಸೂರ್, ವಿಶೇಷ ಪ್ರತಿನಿಧಿ, ಬೆಂಗಳೂರು

ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿಯಿದ್ದು, ದಿನದಿಂದ ದಿನಕ್ಕೆ ಎಲ್ಲ ರಾಜಕೀಯ ಪಕ್ಷಗಳ ಪ್ರಚಾರದ ಆರ್ಭಟ ಜೋರಾಗಿದೆ. ಚುನಾವಣೆ ಪ್ರಚಾರಾರ್ಥವಾಗಿ ಪ್ರಧಾನಿ ಮೋದಿ ಬೆಂಗಳೂರು ಸೇರಿದಂತೆ ಇವತ್ತು ರಾಜ್ಯದಲ್ಲಿ ರೋಡ್ ಶೋ, ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರದ್ದು ಎಂದು ಆರೋಪಿಸಲಾಗಿರುವ ಅಡಿಯೋ ಸಂಚಲನವನ್ನುಂಟು ಮಾಡಿದೆ.

ಅಷ್ಟಕ್ಕೂ ಅಡಿಯೋ ಯಾರದ್ದು? ಅಡಿಯೋದಲ್ಲಿ ಏನಿದೆ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶ ಮಾಡಿರುವುದು ಯಾಕೆ? ಮುಂದಿದೆ ಸಂಪೂರ್ಣ ಮಾಹಿತಿ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹತ್ಯೆಗೆ ಸಂಚು?:

“ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ” ಎಂಬ ಗಂಭೀರ ಆರೋಪವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಅಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, “ಮೋದಿ ಹಾಗೂ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ” ಎಂದು ರಣದೀಪ್ ಸಿಂಗ್ ಸುರ್ಜೆವಾಲ ಗಂಭೀರ ಆರೋಪ ಮಾಡಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರು ದಲಿತ, ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಈ ಸಂಚು ರೂಪಿಸುತ್ತಿದೆ” ಎಂದು ಸುರ್ಜೆವಾಲಾ ಗಂಭೀರ ಆರೋಪ ಮಾಡಿದ್ದಾರೆ.

ಅಡಿಯೋದಲ್ಲಿ ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಬಿಜೆಪಿ ಕಾರ್ಯಕರ್ತ ರವಿ ಎಂಬುವರೊಂದಿಗೆ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ರವಿ ಎಂಬುವರೊಂದಿಗೆ ಮಣಿಕಂಠ ರಾಠೋಡ್, “ನಾನು ಅವರ ಹೆಂಡ್ರು, ಮಕ್ಕಳನ್ನ ಸಾಫ್ (ಕೊಲ್ಲುತ್ತೇನೆ ಎಂಬರ್ಥದಲ್ಲಿ) ಮಾಡ್ತೇನ್ಲೆ. ಅವರ ಫೋನ್ ನಂಬರ್ ಇಲ್ಲಲೇ ನನ್ನತ್ರ. ಖರ್ಗೆ ನಂಬರ್ ನನ್ನತ್ರ ಇದ್ದಿದ್ರೆ ನಾನು ಬಾಯಿಗೆ ಬಂದಂಗ ಮೊಬೈಲದಾಗ ಬೈತೇನ್ಲೇ” ಎಂದಿರುವುದು ಇದೆ.

ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ..

ಇನ್ನು ಅಡಿಯೊ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಇದನ್ನು ಗಂಭೀರವಾಗಿ ತೆಗೆದುಕೊಳ್ಳೂತ್ತೇವೆ. ಆಡಿಯೋ ತಿರುಚಲಾಗಿದೆಯೇ ಎಂದು ನೋಡಬೇಕು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡಿಸುತ್ತೇವೆ” ಎಂದಿದ್ದಾರೆ.

ಸೌಹಾರ್ಧ ರಾಜಕೀಯದ ನಮ್ಮ ನಾಡು ಎತ್ತ ಸಾಗುತ್ತಿದೆ?

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ರಾಜಕೀಯ ಹತ್ಯೆ ಅಥವಾ ಮರ್ಡರಸ್ ಪೊಲಿಟಿಕ್ಸ್ ತುಂಬಾ ಕಡಿಮೆ. ಚುನಾವಣೆ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾರಾದರೂ, ನಂತರ ಅತ್ಯಂತ ಸುಮಧುರ ರಾಜಕೀಯ ಬಾಂಧವ್ಯ ಹೊಂದಿರುವುದು ಹಲವು ಬಾರಿ ಕಂಡು ಬಂದಿದೆ.

ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ, ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದು, ಸಿದ್ದರಾಮಯ್ಯನವರ ಪುತ್ರ ಅಕಾಲಿಕ ಮರಣಕ್ಕೀಡಾದಾಗ ಎಲ್ಲ ಪಕ್ಷಗಳ ರಾಜಕೀಯ ನಾಯಕರು ಅವರಿಗೆ ಸಮಾಧಾನ ಹೇಳಿ ನೋವಿನಲ್ಲಿ ಭಾಗಿಯಾಗಿದ್ದರು.

ಇಂತಹ ಹಲವು ಪ್ರಸಂಗಗಳಲ್ಲಿ ನಮ್ಮ ನಾಡಿನ ರಾಜಕಾರಣಿಗಳ ಪ್ರಬುದ್ಧತೆ ಮತ್ತು ಒಳ್ಳೆಯತನ ಕಾಣಲು ಸಿಕ್ಕಿದೆ. ಆದರೆ ಇದೀಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಯುವ ಅಭ್ಯರ್ಥಿಯೊಬ್ಬರದ್ದು ಎನ್ನಲಾಗಿರುವ ದೂರವಾಣಿ ಸಂಭಾಷಣೆ ಈ ಪರಂಪರೆಗೆ ಇತೀಶ್ರೀ ಹಾಡುವ ಆತಂಕ ನಾಡಿನ ಜನರಿಗೆ ಎದುರಾಗಿದೆ. ಈ ಕುರಿತು ಸಂಪೂರ್ಣ ತನಿಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಮಾಡಿರುವುದು ಗಂಭೀರತೆಗೆ ಸಾಕ್ಷಿಯಾಗಿದೆ.

ಅಭ್ಯರ್ಥಿ ಬಗ್ಗೆ ಬಿಜೆಪಿಯಲ್ಲಿ ಅಪಸ್ವರ ಕೇಳಿ ಬಂದಿತ್ತು…..

ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ವಿರುದ್ಧ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಣಿಕಂಠ್ ರಾಠೋಡ್ ಅವ್ರನ್ನ ಕಣಕ್ಕಿಳಿಸಲು ಆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿತ್ತು.

ಜೊತೆಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಮಣಿಕಂಠ್ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಕ್ಕೂ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ವಯಸ್ಸು 26 ಆಗಿದ್ದರೂ ಅವರ ಮೇಲೆ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂಬುದು ಈ ವಿರೋಧಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ್ ಖರ್ಗೆ ಅವರ ಮೇಲೆ ಮಣಿಕಂಠ ರಾಠೋಡ್ ಕಿಡಿ ಕಾರಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಇಂಥದ್ದೆ ವಿಚಾರಕ್ಕೆ ಬಂಧನಕ್ಕೊಳಗಾಗಿದ್ದ ಮಣಿಕಂಠ

ಈಗ ಬಿಜೆಪಿ ಅಭ್ಯರ್ಥಿ ಆಗಿರುವ ಮಣಿಕಂಠ ರಾಠೋಡ್ ಕಳೆದ ವರ್ಷ ಇಂಥದ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಬೇಲ್ ಮೇಲೆ ಬಿಡುಗಡೆ ಆಗಿದ್ದರು. ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಬೇಕು ಎಂಬ ಅಭಿಯಾನವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರು.

ಆಗ ಹೇಳಿಕೆ ಕೊಟ್ಟಿದ್ದ ಮಣಿಕಂಠ ರಾಠೋಡ್, “”ನೀವು (ಪ್ರಿಯಾಂಕ್ ಖರ್ಗೆ) ಎಕೆ-47 ಗನ್‌ನಿಂದ ನಮ್ಮನ್ನು ಹೊಡೆದರೆ ನಾವು ಸಾಯಲು ಸಿದ್ಧರಿದ್ದೇವೆ. ಜೊತೆಗೆ ನಿಮ್ಮನ್ನು ಹೊಡೆದುರುಳಿಸಲು ಸಿದ್ಧರಿದ್ದೇವೆ” ಎಂದು ಅವಾಜ್ ಹಾಕಿದ್ದರು. ಈ ಕುರಿತು ಜೀವ ಬೆದರಿಕೆ ಹಾಕಿದ್ದಕ್ಕಾಗಿ ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ಮಣಿಕಂಠ ರಾಠೋಡ್ ಬಂಧನವಾಗಿತ್ತು. ನಂತರ ಬೇಲ್ ಮೇಲೆ ಅವರು ಹೊರಗೆ ಬಂದಿದ್ದರು.

ಆದರೆ ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮಿಂಚಿನ ಪ್ರಚಾರ ಮಾಡುತ್ತಿರುವಾಗಲೇ ಇಂಥಹ ಬೆಳವಣಿಗೆ ಆಗಿರುವುದು ವಿಪರ್ಯಾಸ. ಒಟ್ಟಾರೆ ಪ್ರಕರಣದ ಈ ಬಗ್ಗೆ ಸಂಪೂರ್ಣ ತನಿಖೆ ನಡೆದು ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆತಾಗಲಿ ಎಂಬುದು ನಾಡಿದ ಪ್ರಜ್ಞಾವಂತ ಮತದಾರರ ಒತ್ತಾಯ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!