ಕಿರುತೆರೆಯಲ್ಲಿಯೂ ಟಗರು ಪಲ್ಯಕ್ಕೆ ಭರ್ಜರಿ ರೆಸ್ಪಾನ್ಸ್..ಡಾಲಿ ನಿರ್ಮಾಣದ ಸಿನಿಮಾಗೆ ಸಿಕ್ತು ದಾಖಲೆ ಟಿಆರ್ ಪಿ..
ಕನ್ನಡ ಸಿನಿಮಾ ಪ್ರೇಮಿಗಳಿಗೆ ಸದಾಭಿರುಚಿ ಸಿನಿಮಾಗಳನ್ನು ಕೊಡುತ್ತಿರುವ ಡಾಲಿ ಪಿಕ್ಚರ್ಸ್ ನ ಮೂರನೇ ಕೊಡುಗೆ ಟಗರು ಪಲ್ಯ ಕಿರುತೆರೆಯಲ್ಲಿಯೂ ದೊಡ್ಡ ಮಟ್ಟದ ಹಿಟ್ ಕಂಡಿದೆ.
ಬೆಳ್ಳಿಪರದೆ ಹಾಗೂ ಅಮೇಜಾನ್ ಪ್ರೈಮ್ ನಲ್ಲಿಯೂ ಫ್ಯಾಮಿಲಿ ಆಡಿಯನ್ಸ್ ಮನಸೂರೆಗೊಳಿಸಿರುವ ಈ ಚಿತ್ರ ನಾಟಿ ಹಿಟ್ ಎನಿಸಿಕೊಂಡಿದೆ. ಥಿಯೇಟರ್ ಹಾಗೂ ಒಟಿಟಿ ಎರಡು ವೇದಿಕೆಯಲ್ಲಿಯೂ ಗೆದ್ದಿರುವ ಟಗರು ಪಲ್ಯ ಕಿರುತೆರೆ ಪ್ರೇಕ್ಷಕ ವರ್ಗಕ್ಕೂ ರುಚಿಸಿದೆ.
ಎರಡು ವಾರದ ಹಿಂದಷ್ಟೇ ಅಂದರೆ ಜ.7ರಂದು ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ತೆರೆಕಂಡಿತ್ತು. ಕಿರುತೆರೆಗೆ ಅಪ್ಪಳಿಸಿದ್ದ ಈ ಚಿತ್ರ ಟಿಆರ್ ಪಿಯಲ್ಲಿ ಧೂಳ್ ಎಬ್ಬಿ ಸಿದೆ. 7.2 ಟಿಆರ್ ಪಿ ಟಗರು ಪಲ್ಯ ಸಿನಿಮಾಗೆ ದಕ್ಕಿದೆ.
ಹೊಸಬರ ಸಿನಿಮಾಗೆ ಇಷ್ಟು ಟಿಆರ್ ಪಿ ಬಂದಿರೋದು ನಿಜಕ್ಕೂ ದಾಖಲೆಯೇ ಸರಿ..ಈ ಹಿಂದೆ ಡಾಲಿ ಪಿಕ್ಚರ್ಸ್ ನಿರ್ಮಾಣ ಮಾಡಿದ್ದ ಚೊಚ್ಚಲ ಸಿನಿಮಾ ಬಡವ ರಾಸ್ಕಲ್ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ದೊಡ್ಡ ಮಟ್ಟದ ಹಿಟ್ ಕಂಡಿತ್ತು. ಕಲರ್ಸ್ ಕನ್ನಡ ವಾಹಿನಿಗೆ ಎರಡು ಅದ್ಭುತ ಚಿತ್ರಗಳನ್ನು ನೀಡಿದೆ ಡಾಲಿ ಪಿಕ್ಚರ್ಸ್…
ಧನಂಜಯ್ ನಿರ್ಮಾಣದ ಟಗರು ಪಲ್ಯಕ್ಕೆ ಉಮೇಶ್ ಕೆ. ಕೃಪಾ ಆಕ್ಷನ್ ಕಟ್ ಹೇಳಿದ್ದರು. ಇದು ಇವರ ಮೊದಲ ಪ್ರಯತ್ನ. ಕನ್ನಡ ಸಿನಿಮಾರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ನಟ ನಾಗಭೂಷಣ ಮತ್ತು ಅಮೃತಾ ಪ್ರೇಮ್ ‘ಟಗರು ಪಲ್ಯ’ ದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ವಾಸುಕಿ ವೈಭವ್, ಚಿತ್ರಾ ಶೆಣೈ ಮತ್ತು ವೈಜನಾಥ್ ಬಿರಾದಾರ್ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದರು. ವಾಸುಕಿ ವೈಭವ್ ಸಂಗೀತ ಸಂಯೋಜಿಸುವ ಜೊತೆಗೆ ಒಂದು ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ವರ್ಷದ ಅಕ್ಟೋಬರ್ 27 ರಂದು ಈ ಸಿನಿಮಾ ತೆರೆ ಕಂಡಿತ್ತು.