ವಿನಯ್ ರಾಜ್ ಕುಮಾರ್ ಸಿನಿಮಾಗೆ ಕಾಲಿವುಡ್ ಸ್ಟಾರ್ ಸಾಥ್..ಸ್ವಾತಿಷ್ಠ ಕೃಷ್ಣನ್ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದ ವಿಜಯ್ ಸೇತುಪತಿ..
ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಸಂಗಮದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಫೆಬ್ರವರಿ 8ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರ್ತಿದೆ.
ಈಗಾಗಲೇ ಒಂದು ಸರಳ ಪ್ರೇಮಕಥೆ ಬಳಗ ಪ್ರಚಾರದ ಪಡಸಾಲೆಗೆ ಧುಮುಕಿದೆ. ಅದರ ಭಾಗವಾಗಿ ಇಂದು ನಾಯಕಿ ಸ್ವಾತಿಷ್ಠ ಕೃಷ್ಣನ್ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಲಾಗಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಕ್ಯಾರೆಕ್ಟರ್ ಟೀಸರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ.
ಸ್ವಾತಿಷ್ಠ ಕೃಷ್ಣನ್ ಅನುರಾಗ ಎಂಬ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಯಾವುದಕ್ಕೂ ಜಗ್ಗದೇ ಧೈರ್ಯವಾಗಿ ಮುನ್ನುಗ್ಗುವಾಗ ಜರ್ನಲಿಸ್ಟ್ ಆಗಿ ಪ್ರತ್ಯಕ್ಷರಾಗಿದ್ದಾರೆ.
ಕಮಲ್ ಹಾಸನ್ ನಟನೆಯ ವಿಕ್ರಮ್ ಸೇರಿದಂತೆ ಒಂದಷ್ಟು ತಮಿಳು ಸಿನಿಮಾದಲ್ಲಿ ನಟಿಸಿರುವ ಸ್ವಾತಿಷ್ಠಗೆ ಒಂದು ಸರಳ ಪ್ರೇಮಕಥೆ ಚೊಚ್ಚಲ ಕನ್ನಡ ಸಿನಿಮಾವಾಗಿದೆ.
ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ನಾಯಕಿಯಾರಾಗಿ ನಟಿಸಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ. ಅಂದಹಾಗೇ ಈ ಸಿನಿಮಾಗೆ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದಾರೆ.