ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯ ಕರ್ತೃ ಶ್ರೀ ಜ.ಫಕೀರೇಶ್ವರರ ಭಕ್ತರು ಮತ್ತು ಜ.ಫ. ದಿಂಗಾಲೇಶ್ವರ ಸ್ವಾಮೀಜಿ ಫೆ.೨೧ರಂದು ಗದಗ ನಗರದಲ್ಲಿ ಕರಾಳ ದಿನಾಚರಣೆ ಮಾಡುವುದಾಗಿ ನಿರ್ಧರಿಸಿದ್ದಕ್ಕೆ ತಾಲೂಕಾಡಳಿತ ಬ್ರೇಕ್ ಹಾಕಲು ಫೆ.೨೦ರ ಮಧ್ಯರಾತ್ರಿಯಿಂದಲೇ ಪಟ್ಟಣದಾದ್ಯಂತ ೧೪೪ ಕಲಂ ಜಾರಿಗೊಳಿಸಿ ಪ್ರತಿಭಟನೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಯಿತು.
ಫೆ.೨೧ರಂದು ಗದಗ ನಗರದಲ್ಲಿ ಲಿಂ. ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿ ಆಚರಣೆಯ ಅಂಗವಾಗಿ ಆಯೋಜಿಸಿದ್ದ ಭಾವೈಕ್ಯತಾ ದಿನಾಚರಣೆಯನ್ನು ವಿರೋಧಿಸಿ ಶಿರಹಟ್ಟಿಯ ಜ.ಫ.ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಭಕ್ತರು ಗದಗ ನಗರದಲ್ಲಿ ಇದಕ್ಕೆ ಪ್ರತಿಯಾಗಿ ಕರಾಳ ದಿನಾಚರಣೆಯನ್ನು ಆಚರಿಸುವುದಾಗಿ ಘೋಷಿಸಿದ್ದರು. ಆದರೆ ತಾಲೂಕಾಡಳಿತ ಮಂಗಳವಾರ ರಾತ್ರಿಯೇ ಪಟ್ಟಣದ ಕೆಲವರ ಮೇಲೆ ನೋಟೀಸ್ ಜಾರಿ ಮಾಡಿ, ಪಟ್ಟಣದಾದ್ಯಂತ ಮತ್ತು ಶ್ರೀಮಠದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ಶ್ರೀಮಠಕ್ಕೆ ಯಾರೂ ಪ್ರವೇಶಿಸದಂತೆ ಪೊಲಿಸರು ತಡೆಹಿಡಿದರು.
ಪತ್ರಿಕಾಗೋಷ್ಠಿ ನಡೆಸಿ ಬೆಳ್ಳಟ್ಟಿಯ ಶಾಲಾ ಕಟ್ಟಡ ವೀಕ್ಷಣೆಗೆ ತೆರಳುತ್ತಿದ್ದ ಜ.ಫ. ದಿಂಗಾಲೇಶ್ವರ ಸ್ವಾಮೀಜಿಗಳನ್ನೂ ಮಠದಿಂದ ಹೊರಬಿಡದಂತೆ ಪೊಲೀಸರು ಶ್ರೀಗಳ ಕಾರನ್ನು ತಡೆದರು. ಈ ಸಂದರ್ಭದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ಇಂದು ಗದಗನಲ್ಲಿ ನಡೆಯಬೇಕಿದ್ದ ನಮ್ಮ ಕರಾಳ ದಿನವನ್ನು, ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಆದರೆ ಅಲ್ಲಿ ಜಯಂತಿ ಆಚರಣೆಗೆ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ನಮ್ಮ ಭಕ್ತರು ಯಾವುದೇ ತಪ್ಪು ಮಾಡಿದಿದ್ದರೂ ಸಹ ಅವರ ಮೇಲೆ ವಿನಾಕಾರಣ ನೊಟೀಸ್ ಜಾರಿ ಮಾಡಿ ಬೆದರಿಸುವ ಕೆಲಸ ಮಾಡಿದ್ದಾರೆ. ಮಧ್ಯರಾತ್ರಿ ವೇಳೆ ಮನೆ ಮನೆಗೆ ತೆರಳಿ ನೊಟೀಸ್ ನೀಡಿದ್ದಾರೆ. ಆದ್ದರಿಂದ ಈ ಕೂಡಲೇ ನಮ್ಮ ಭಕ್ತರ ಮೇಲೆ ಹೊರಡಿಸಿದÀ ನೊಟೀಸುಗಳನ್ನು ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ನಾಳೆಯಿಂದ ಮತ್ತೆ ಬೇರೆ ಹಂತದ ಹೋರಾಟ ಕೈಕೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು. ಸುದೀರ್ಘ ಇತಿಹಾಸವಿರುವ, ಭಾವೈಕ್ಯತೆಯ ಪೀಠಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಜ.ಫ.ದಿಂಗಾಲೇಶ್ವರ ಸ್ವಾಮೀಜಿ ಶ್ರೀಮಠದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ವತಃ ಎಸ್ಪಿ ಅವರೇ ಬುಧವಾರ ಬೆಳಿಗ್ಗೆ ಪಟ್ಟಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಜೊತೆಗೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಗದಗ ಡಿಎಸ್ಪಿ ಜಡ್.ಎಚ್. ಇನಾಮದಾರ, ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ, ಲಕ್ಷೆö್ಮÃಶ್ವರದ ಈರಣ್ಣ ರಿತ್ತಿ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.