ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಪಟ್ಟಣದ ಮೈಲಾರಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದ್ದು, `ಚಿನ್ನದ ಚೊಂಬು ತುಂಬಿ ತುಳುಕಿತಲೇ ಪರಾಕ್’ ಎಂದು ಗೊರವಪ್ಪನಾದ ಕೋಟೆಪ್ಪ ಕಾರ್ಣಿಕ ನುಡಿಯನ್ನು ನುಡಿದರು.
ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿ ಪ್ರತಿ ವರ್ಷ ಭರತ ಹುಣ್ಣಿಮೆಯಂದು ನಡೆಯುವ ಕಾರ್ಣಿಕಕ್ಕೆ ರೈತರು ಹೆಚ್ಚು ಮಹತ್ವ ನೀಡುತ್ತಾರೆ. ಈ ಬಾರಿಯ ಕಾರ್ಣಿಕ ನುಡಿಯನ್ನು ವಿಶ್ಲೇಷಣೆಯನ್ನು ರಾಜ್ಯದಲ್ಲಿ ಸಮೃದ್ಧವಾದ ಮಳೆ, ಬೆಳೆಯಾಗಲಿದ್ದು, ಜನರೆಲ್ಲಾ ಸುಭಿಕ್ಷೆಯಿಂದ ನೆಮ್ಮದಿ, ಸಹಬಾಳ್ವೆಯಿಂದ ಬದುಕುತ್ತಾರೆ ಎಂದು ಅರ್ಥೈಸಬಹುದಾಗಿದೆ.
ಭವಿಷ್ಯವಾಣಿ ನುಡಿಯುವ ಕಾರ್ಣಿಕೋತ್ಸವದ ಮೊದಲು ಗೊರವಯ್ಯ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ, ತಪದಲ್ಲಿರುತ್ತಾನೆ. ನಂತರ ಕ್ಷೇತ್ರದ ಧರ್ಮದರ್ಶಿಯವರೊಂದಿಗೆ ಡಂಕನಮರಡಿ ಎನ್ನುವ ಸ್ಥಳಕ್ಕೆ ಬಂದು, ಅಲ್ಲಿ ಧರ್ಮದರ್ಶಿಗಳಿಂದ ಬಂಡಾರದ ಆಶೀರ್ವಾದ ಪಡೆದು ನಂತರ 12 ಅಡಿ ಎತ್ತರದ ಬಿಲ್ಲು ಗಂಬವನ್ನು ಸರ ಸರನೇರಿ, ಆಕಾಶವನ್ನು ನೋಡುತ್ತಾ ಒಂದು ವಾಕ್ಯದ ಭವಿಷ್ಯವನ್ನು ನುಡಿದರು.
ಈ ಸಂಧರ್ಭದಲ್ಲಿ ಧರ್ಮಕರ್ತರುಗಳಾದ ದತ್ತಾತ್ರೇಯರಾವ್, ಡಾ. ಪಿ.ನಾಗೇಶ್ವರ ರಾವ್, ಕೋಟೇಶ್ ರಾವ್, ಪಿ.ಮಾರ್ತಾಂಡ ರಾವ್, ಪ್ರವೀಣ್, ಪುರಸಭೆ ಸದಸ್ಯ ಕಿರಣ್ ಶ್ಯಾನಬೋಗ, ಗೊರವಯ್ಯ ಕೆ.ಕೊಟೆಪ್ಪ, ಎ.ಮಂಜಪ್ಪ, ಮೈಲಾರಿ, ಎ.ನಿಂಗಪ್ಪ ಸೇರಿದಂತೆ ಮೈಲಾರಲಿಂಗೇಶ್ವರನ ಅಪಾರ ಭಕ್ತಾಧಿಗಳು ಪಾಲ್ಗೋಂಡು ಭಕ್ತಿ ಸಮರ್ಪಿಸಿದರು.