ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಶಾಖಾ ಶಿವಯೋಗಮಂದಿರಮಠ ನಿಡಗುಂದಿಕೊಪ್ಪ ಗ್ರಾಮದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳವರ 94ನೇ ಪುಣ್ಯಸ್ಮರಣೋತ್ಸವ ಸೋಮವಾರ ಸಂಜೆ ನಾಡಿನ ಹರ-ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಯಲಬುರ್ಗಾ ತಾಲೂಕು ಬಿನ್ನಾಳ ಗ್ರಾಮದಿಂದ ತೇರಿನ ಕಳಸ ಹಾಗೂ ಮುಧೋಳ ಗ್ರಾಮದಿಂದ ಪಾಲಕಿ ಹಾಗೂ ನಂದಿಕೋಲ ಮತ್ತು ಮಾರನಬಸರಿ ಗ್ರಾಮದಿಂದ ರಥದ ಹಗ್ಗವನ್ನು, ನಿಡಗುಂದಿಯಿಂದ ಕುಮಾರೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆಯು ಸಕಲ ವಾದ್ಯ ವೈಭವದೊಂದಿಗೆ ತರಲಾಯಿತು. ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು.
ದೀಪಾಂಕಾರಗಳಿಂದ ಆಕರ್ಷಕವಾದ ತೇರು ಸಂಜೆ 7ಕ್ಕೆ ಚಲಿಸಲು ಆರಂಭಿಸಿದಾಗ ಭಕ್ತರು ಉತ್ತತ್ತಿ ಎಸೆದು ಘೋಷಣೆ ಕೂಗುತ್ತಾ ತೇರು ಎಳೆದರು. ತೇರು ಎಳೆಯುವ ಸಂದರ್ಭದಲ್ಲಿ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರು, ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ನಿರಂಜನ ದೇವರು, ಗದುಗಿನ ಚಂದ್ರಶೇಖರ ದೇವರು, ಅಂಕಲಗಿ ಮಠದ ಅಡವಿ ಸಿದ್ದರಾಮ ಸ್ವಾಮೀಜಿಗಳು, ಗ್ರಾಮದ ಗುರು-ಹಿರಿಯರು, ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು.