ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಜೋಡೆತ್ತಿನ ಗಾಡಾ ಸ್ಪರ್ಧೆಯಿಂದ ರೈತರಲ್ಲಿ ಪರಸ್ಪರ ಸ್ನೇಹ, ಭ್ರಾತೃತ್ವ, ಭಾಂದವ್ಯ, ವಿಚಾರ ವಿನಿಮಯ ಸಾಧ್ಯವಾಗುತ್ತಿದೆ. ಇಂತಹ ಸ್ಫರ್ಧೆಗಳ ಸಂದರ್ಭದಲ್ಲಿ ನೂತನ ಕೃಷಿ ಪದ್ಧತಿ, ಹೊಸ ಸಂಶೋಧನೆ, ಕೃಷಿ ತಳಿ ಬೀಜಗಳು ಸೇರಿ ಕೃಷಿ ಪೂರಕ ವಿಚಾರ ವಿನಮಯಗಳು ನಡೆಯಬೇಕು ಎಂದು ತಾಲೂಕ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಹೇಳಿದರು.
ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಶಿವರಾತ್ರಿ ಪ್ರಯುಕ್ತ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಫರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ರೈತರು ತಮ್ಮ ಜೀವನಾಡಿಯಾದ ಎತ್ತುಗಳೊಂದಿಗೆ ನಿತ್ಯದ ಬದುಕು ಆರಂಭಿಸುತ್ತಾರೆ. ರೈತರು ಪ್ರೀತಿಯಿಂದ ಸಾಕಿದ ಎತ್ತುಗಳಿಗೆ ತರಬೇತಿ ನೀಡಿ ಎತ್ತುಗಳ ಓಟ, ವಿಶೇಷತೆ, ಅಂದ-ಚಂದ, ತಾಕತ್ತನ್ನು ಕಂಡು ಖುಷಿ ಪಡುವುದೇ ರೈತರಿಗೆ ಹಬ್ಬ. ಇಂದಿನ ಮೊಬೈಲ್ ಹಾವಳಿಯಿಂದ ಗ್ರಾಮೀಣ ಕ್ರೀಡೆಗಳು ನಶಿಸುತ್ತಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಯುವ ರೈತರ ಮತ್ತು ಸಂಘಟಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಬಳಗದ ಗದಗ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ ಮಾತನಾಡಿ, ಕೃಷಿ ಚಟುವಟಿಕೆಗಳ ಬಿಡುವಿನ ವೇಳೆ ಗ್ರಾಮೀಣ ಭಾಗದಲ್ಲಿ ರೈತರು ಸಂತೋಷ-ಸಂಭ್ರಮಕ್ಕಾಗಿ ನಡೆಸುವ ಗಾಡಾ ಓಡಿಸುವ ಸ್ಫರ್ಧೆಗೆ ಬಹುತೇಕ ಎಲ್ಲರೂ ಸಹಾಯ-ಸಹಕಾರ ನೀಡಿರುವುದು ಶ್ಲಾಘನೀಯ ಎಂದರು.
ಸಂಜೆ ಗೆದ್ದ ಜೋಡಿ ಎತ್ತುಗಳಿಗೆ ಪ್ರಥಮ ಹೋಂಡಾ ಬೈಕ್, ದ್ವಿತೀಯ 50 ಸಾವಿರ ರೂ., ತೃತೀಯ ಚತುರ್ಥ ಮತ್ತು ಐದನೇ ಬಹುಮಾನ 40 ಸಾವಿರ ರೂ. ಹೀಗೆ 18 ಬಹುಮಾನ ವಿತರಿಸಲಾಯಿತು.
ಬಳಗದ ರಾಜ್ಯಾಧ್ಯಕ್ಷ ಸುರೇಶ ಗೋಕಾವಿ, ತಾಲೂಕಾಧ್ಯಕ್ಷ ಸುರೇಶ ಹಟ್ಟಿ, ಸಮ್ಮೇದ ಗೋಗಿ, ಆನಂದ ತಟ್ಟಿ, ಮಂಜುನಾಥ ಮುಳಗುಂದ, ಮಹಾಂತೇಶ ಗುದ್ನಾಳ, ಮಂಜುನಾಥ ಶರಸೂರಿ, ಶಿರಾಜ್ ಡಾಲಾಯತ್, ಬಸವರಾಜ ಕಲ್ಲೂರ, ಸಾಗರ ಕಲಾಲ, ನೀಲಪ್ಪ ಬಸಾಪೂರ, ಬಸನಗೌಡ ಪಾಟೀಲ, ಮಹೇಶ ಸೂರಣಗಿ, ಮುದಕನಗೌಡ ಪಾಟೀಲ, ಕೃಷ್ಣ ಲಮಾಣಿ, ಬಸವರಾಜ ಹರಿಜನ ಸೇರಿದಂತೆ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು, ಗ್ರಾಮಸ್ಥರು ಇದ್ದರು.
ಕೃಷಿ ಕೆಲಸದ ಜತೆಗೆ ಬಂಡಿ ಓಟಕ್ಕೆ ಅಂತಲೇ ಎತ್ತುಗಳಿಗೆ ಹುರುಳಿ ಕಾಳು, ಜೋಳದ ನುಚ್ಚು, ಹಿಂಡಿ ಸೇರಿ ಪೌಷ್ಠಿಕಾಂಶಭರಿತ ಪದಾರ್ಥಗಳನ್ನ ತಿನ್ನಿಸಿ ಕಟ್ಟುಮಸ್ತಾಗಿ ಬೆಳೆಸಿ, ತರಬೇತಿ ನೀಡಿ ಸ್ಪರ್ಧೆಯ ಅಖಾಡಕ್ಕೆ ತಂದಿದ್ದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಎತ್ತಿನ ಜೋಡಿಗಳು ಸಂಜೆವರೆಗೂ ಪ್ರದರ್ಶನ ನೀಡಿದವು.