ಶಿಕ್ಷಣದೊಂದಿಗೆ ಉದ್ಯೋಗ ವ್ಯವಸ್ಥೆ ಬಲಗೊಳ್ಳಲಿ

0
gelhot
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಳ್ಳಿಗಳನ್ನು ಸ್ವಾವಲಂಬಿ ಮತ್ತು ಸುಸಜ್ಜಿತವಾಗಿ ಮಾಡದಿದ್ದರೆ, ದೇಶದ ಸರಿಯಾದ ಮತ್ತು ಸಮತೋಲಿತ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಸಾರ್ವತ್ರಿಕವಾಗಿ ಒಪ್ಪಿಕೊಂಡ ಸತ್ಯ.

Advertisement

ಶಿಕ್ಷಣ, ಕೃಷಿ ಮತ್ತು ಇತರ ಉದ್ಯೋಗ ಸಂಬಂಧಿತ ಕೆಲಸಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಪ್ರತಿಯೊಂದು ಗ್ರಾಮ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.

ಬುಧವಾರ ನಡೆದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ಗ್ರಾಮೀಣ ಅಭಿವೃದ್ಧಿಗಾಗಿ, ಪಂಚಾಯತ್ ರಾಜ್, ಶಿಕ್ಷಣ, ಕೃಷಿ ಮತ್ತು ಇತರ ಉದ್ಯೋಗ ಸಂಬಂಧಿತ ಕೆಲಸಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಬಹಳ ಮುಖ್ಯ.

ಪಂಚಾಯತ್ ರಾಜ್ ವ್ಯವಸ್ಥೆಯು ಭಾರತೀಯ ದೃಷ್ಟಿಕೋನದಿಂದ ಬಹಳ ಪ್ರಾಚೀನ ಕಲ್ಪನೆಯಾಗಿದೆ. ನಮ್ಮ ಮೂರು ಹಂತದ ಆಡಳಿತ ವ್ಯವಸ್ಥೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೆ ಸ್ಥಳೀಯ ಆಡಳಿತದ ಘಟಕವಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ. ಸಾಂವಿಧಾನಿಕ ತಿದ್ದುಪಡಿಯ ಮೂಲಕ, ಪಂಚಾಯತ್ ರಾಜ್ ವ್ಯವಸ್ಥೆಗೆ ಸಮಗ್ರ ಅಧಿಕಾರವನ್ನು ನೀಡುವ ಮೂಲಕ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.

ghatikotsava

ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಯುವಜನರ ವಲಸೆಯು ಗಂಭೀರ ಸಮಸ್ಯೆಯಾಗಿದೆ. ಹಳ್ಳಿಗಳ ಅಭಿವೃದ್ಧಿಯಾಗಬೇಕೆಂದರೆ, ಈ ವಲಸೆ ಹೋಗುವುದು ಒಳ್ಳೆಯದಲ್ಲ. ಜನತೆ ವಲಸೆ ಹೋಗುವುದನ್ನು ತಡೆಯಬೇಕಾದರೆ ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಗ್ರಾಮ ಅಭಿವೃದ್ಧಿಯಿಂದ ಇಡೀ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಈ ವಿಶ್ವವಿದ್ಯಾಲಯವು ಭಾರತದಲ್ಲೇ ಒಂದು ವಿಶಿಷ್ಟವಾದ ವಿಶ್ವವಿದ್ಯಾಲಯವಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯವನ್ನು ಪರಿಗಣಿಸುತ್ತಿದೆ. ಈ ಘಟಿಕೋತ್ಸವ ಸಮಾರಂಭದಲ್ಲಿ ಸಿ. ನಾರಾಯಣ ಸ್ವಾಮಿ ಮತ್ತು ಚಿರಂಜೀವಿ ಸಿಂಗ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದ್ದು, ಅವರ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಟಿ.ಆರ್. ರಘುನಂದನ್, ವಿವಿ ಕುಲಪತಿ ವಿಷ್ಣುಕಾಂತ್ ಎಸ್.ಚಟಪಲ್ಲಿ ಮುಂತಾದ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

ದೇಶದ ಹಿತಕ್ಕಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಪ್ರಾಚೀನ ಕಾಲದಲ್ಲಿ ಹಳ್ಳಿಗಳಲ್ಲಿ ಮುಖಂಡರ ನೇತೃತ್ವದಲ್ಲಿ ನ್ಯಾಯ ಒದಗಿಸಿ ಸಮಸ್ಯೆ ಇತ್ಯರ್ಥಪಡಿಸುತ್ತಿದ್ದರು. ಈಗಲೂ ಕೆಲವು ಗ್ರಾಮಗಳಲ್ಲಿ ಈ ವ್ಯವಸ್ಥೆ ಮುಂದುವರೆದಿದೆ. ಗ್ರಾಮದಲ್ಲಿ ಇರುವ ಯಾವೊಬ್ಬ ವ್ಯಕ್ತಿಯೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದ ಜೊತೆ ಜೊತೆಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಹಿಂದಿನ ಕಾಲದಲ್ಲಿ ಬಡವರ ಕಲ್ಯಾಣಕ್ಕಾಗಿ ಅಂತ್ಯೋದಯ ಕಾರ್ಯಕ್ರಮವಿತ್ತು. ಈ ರೀತಿಯ ಕಾರ್ಯಕ್ರಮಗಳು ಪ್ರಸ್ತುತ ದಿನಗಳಲ್ಲಿ ಅವಶ್ಯಕವಾಗಿದೆ.
– ಥಾವರ್ ಚಂದ್ ಗೆಹ್ಲೋಟ್.
ಕರ್ನಾಟಕದ ರಾಜ್ಯಪಾಲರು.

 


Spread the love

LEAVE A REPLY

Please enter your comment!
Please enter your name here