ಮಕ್ಕಳ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ

0
radha
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳ ಸಫಲತೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಾಕಷ್ಟು ಕಾರ್ಯಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಅಭಿವೃದ್ಧಿ ಹಾಗೂ ಮಕ್ಕಳ ರಕ್ಷಣೆಗಾಗಿ ಸಾಕಷ್ಟು ಯೋಜನೆಗಳಿವೆ. ಅವುಗಳನ್ನು ಮಕ್ಕಳಿಗೆ ತಲುಪಿಸುವ ಕಾರ್ಯವನ್ನು ಸತತವಾಗಿ ಮಾಡುತ್ತ ಬರಲಾಗುತ್ತಿದೆ. ಮಕ್ಕಳು ತಮಗಿರುವ ಹಕ್ಕುಗಳು ಹಾಗೂ ಯೋಜನೆಗಳ ಕುರಿತು ತಿಳಿದುಕೊಂಡಿರಬೇಕು.

Advertisement

ಅಂದಾಗ ಮಾತ್ರ ಮಕ್ಕಳು ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಿರೂಪಣಾಧಿಕಾರಿ ರಾಧಾ ಜಿ.ಮಣ್ಣೂರು ನುಡಿದರು.

ನಗರದ ಜಗದ್ಗುರು ತೊಂಟದಾರ್ಯ ಪ್ರೌಢಶಾಲೆಯಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, ಪೋಕ್ಸೊ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಆರ್‌ಟಿಇ ಕಾಯ್ದೆ, ಬಾಲಕಾರ್ಮಿಕ ಹಾಗೂ ಭಿಕ್ಷಾಟನೆ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ, ಮನೋಸಾಮಾಜಿಕ ಸಮಸ್ಯೆಗಳು ಹಾಗೂ ಪರಿಹಾರ ಕುರಿತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಸೋಮಶೇಖರ ಬಿಜ್ಜಳ ಮಾತನಾಡಿ, ಮಕ್ಕಳು ಹದಿವಯಸ್ಸಿನಲ್ಲಿ ಆಗುವ ದೈಹಿಕ, ಮಾನಸಿಕ, ಬೌದ್ಧಿಕ ಬದಲಾವಣೆಗಳ ಬಗ್ಗೆ ಮಕ್ಕಳಿಗಿಂತ ತಂದೆ-ತಾಯಿಗಳು ಹೆಚ್ಚಾಗಿ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಬೆಳವಣಿಗೆಗೆ ತಾಯಿಯ ಗರ್ಭದಿಂದಲೇ ಆರೈಕೆ, ಮುಖ್ಯ ಅನುವಂಶತೆ ಹಾಗೂ ಮಿದುಳಿನ ಬೆಳವಣಿಗೆಗೆ ಅದು ಸಾಕಷ್ಟು ಪರಿಣಾಮಕಾರಿ. ಹೀಗಾಗಿ ಹೆಣ್ಣು ಮಕ್ಕಳು ಗರ್ಭಿಣಿಯಾದಾಗ ಉತ್ತಮ ವಿಚಾರ ಹಾಗೂ ವಾತಾವರಣ ಹೊಂದುವುದು ಅವಶ್ಯಕವಾಗಿದೆ. ಮಗು ಉತ್ತಮ ಬೆಳವಣಿಗೆಗೆ ಪೋಷಕರ ಆರೈಕೆ, ಹಿರಿಯರ ನಡುವಳಿಕೆ, ಕುಟುಂಬದ ವಾತಾವರಣ ಬಹುಮುಖ್ಯ ಎಂದು ಮಕ್ಕಳಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಜಗದ್ಗುರು ತೊಂಟದಾರ್ಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೋಟ್ರೇಶ ಮೆಣಸಿನಕಾಯಿ, ರಮೇಶ ಕಳ್ಳಿಮನಿ, ರೂಪಾ ಉಪ್ಪಿನ್, ಲಲಿತಾ ಕುಂಬಾರ, ಬೈಲಪ್ಪಗೌಡ ಮಲ್ಲನಗೌಡ್ರ ಭಾಗವಹಿಸಿದ್ದರು. ರಮೇಶ ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅನ್ನಪೂರ್ಣ ಗಾಣಿಗೇರ ಮಾತನಾಡಿ, ಶಾಲಾ ವಿದ್ಯಾರ್ಥಿಗಳೆಲ್ಲ ಉತ್ತಮ ನಡುವಳಿಕೆಯೊಂದಿಗೆ ತಮ್ಮ ಗೌರವ ಕಾಪಾಡಿಕೊಳ್ಳಬೇಕು. ತಮ್ಮ ಭವಿಷ್ಯದ ಕುರಿತು ಕಾಳಜಿ ಉಳ್ಳವರಾಗಿರಬೇಕು ಎಂದರು.


Spread the love

LEAVE A REPLY

Please enter your comment!
Please enter your name here